Saturday 31 March 2012

ಕಸಬರಿಗೆಯ ಕಥೆ

ನನ್ನ ಹೆಸರು ಕಸಬರಿಗೆ
ನಾ ಹೋಗುವೆ ಎಲ್ಲರ ಮನೆಗೆ
ಸ್ವಚ್ಛತೆಗೆ ನಾ ಇರುವೆ ಮೊದಲಪಂಥಿಯಲ್ಲಿ
ಆ ಮೇಲೆ ನಿಲ್ಲುವದು ಮಾತ್ರ ಮೂಲೆಯಲ್ಲಿ

ಅಂದು ನಾನಾಡುತ್ತಿದ್ದೆ ತಾಯಮಡಿಲಲ್ಲಿ
ಬಂದ ಧಾಂಡಿಗನೊಬ್ಬ ನನ್ನೇ ನೋಡುತ ಅಲ್ಲಿ
ಕತ್ತಿಯಿಂದ ಕೊಚ್ಚಿ ಬೇರ್ಪಡಿಸಿದ ನನ್ನ ತಾಯಿಯಿಂದ
ನಾನಾಗ   ಕಣ್ಣೀರಿಡುತ್ತಿದ್ದೆ ಮೂಕರೋದನದಿಂದ

ನನ್ನನ್ನು ಎಳೆದುತಂದನವ ತನ್ನ ಮನೆಗೆ
ಮನೆಯವರೆಲ್ಲ ನುಡಿದರು ಆಗುವದಿದು ಒಳ್ಳೆ ಕಸಬರಿಗೆ
ಚಾಕುವಿನಿಂದ ಉಜ್ಜಿ ಮಾಡಿದರು ನನ್ನ ಮೈ ನುಣುಪು
ನನಗಾಗ ನೋವಿನಿಂದ ಆಗುತ್ತಿತ್ತು ತಾಯ ನೆನಪು

ನನ್ನ ಸೌಂದರ್ಯ ನೋಡಿ ನಾನೇ ಒಮ್ಮೆ ಮೈಮರೆತೆ
ಕ್ಷಣದಲ್ಲೇ ಎಚ್ಚೆತ್ತು ನಾನಾರೆಂಬ ವಾಸ್ತವವ ಅರಿತೆ
ಪ್ರತಿದಿನವೂ ನಾ ಮಾಡುತ್ತಿದ್ದೆ ಮನೆಯ ಸ್ವಚ್ಚ
ಆದರೂ ನನ್ನನ್ನು ನಡೆಸಿಕೊಳ್ಳುವ ರೀತಿ ತುಚ್ಛ

ದಿನ ಕಳೆದಂತೆ ನಾನಾದೆ ಕೃಶ
ಉಳಿದಿಲ್ಲ ನನಗೀಗ ಯಾವದೇ ಪಾಶ
ಮಾಸಿಹೋಯಿತು ನನ್ನ ನುಣುಪು ತ್ವಚೆ
ನಿಷ್ಕರುಣೆಯಿಂದ ನನ್ನ ತಳ್ಳಿದರು ಆಚೆ