Sunday 16 September 2012


ಅಜ್ಜಿಯ ಸೀರೆ
ಅಜ್ಜಿಪೆಟ್ಟಿಗೆಯಲಿ ಇತ್ತೊಂದು ರೇಷಿಮೆ ಸೀರೆ
ಅದರ ತುಂಬೆಲ್ಲ ಅಜ್ಜಿಯ ನೆನಪಿನಾ ಧಾರೆ
ಒಂದೇ ನೋಟದಿ ಕಣ್ಮನವ ಸೆಳೆದಿತ್ತು
ಸ್ಪರ್ಶಿಸಲು ಅದರಲ್ಲಿ ಬೆಣ್ಣೆಯ ನುಣುಪಿತ್ತು

ಅದರಂಚಿನಲ್ಲೋ ನವಿಲಿನ ಚಿತ್ತಾರ
ಸೀರೆಯಳತೆಯೋ ಗಜದ ವಿಸ್ತಾರ
ಸುತ್ತಿ ಮೆರೆಯುವದು ಕಷ್ಟದ ವಿಚಾರ
ಗ್ರಹಿಸಿದರೆನೆ ಹೆದರಿಕೆ ಅದರಲ್ಲಿ ನನ್ನ ಆಕಾರ

ಕತ್ತರಿಸ ಹೋದರೆ ಎದಿರು ಅಜ್ಜಿಮುಖ ಬರುತ್ತಿತ್ತು
ಮಾಡಲೇನೆಂದು  ಪೆಟ್ಟಿಗೆಯಲಿ ಭದ್ರವಾಗಿತ್ತು
ಅಂದು ನೆನಪಾಗಿ ನೋಡಿದರೆ........
ಜಿರಳೆ ಅದರಲ್ಲಿ ಚಿತ್ತಾರ ಬಿಡಿಸಿತ್ತು
ಪಾಪ ಅಜ್ಜಿಯ ಸೀರೆ ಗುಜರಿ ಮಾಲಾಗಿತ್ತು

Wednesday 12 September 2012


ಸೋಲು ಗೆಲುವು
ಕಲಿಯಲೇ ಬೇಕು ಒಮ್ಮೆಯಾದರೂ
ಜೀವನದಲಿ ಸೋಲನು
ಇಲ್ಲದಿರೆ ಅರಿಯಲಾರೆ ಬದುಕನು
ಸೋಲ ಕಲಿಸೋಕೆ ಯಾವ ಶಾಲೆಗಳಿಲ್ಲ
ಉಂಟು ನೂರು ದಾರಿಗಳು ಗೆಲ್ಲುವದಕೆ
ಎಲ್ಲ ಗುರಿಗಳಿಗೂ ಗೆಲುವೆಂಬುದೇ ಕೊನೆಯು
ಗೆಲಿವಿಗಾಗಿಯೇ ತುಡಿತ,ಮುಡಿಪು ದೇವರಿಗೆ
ಗೆಲುವಿನಾ ಏಣಿಯನು ಏರುವದು ಸುಲಭ
ಇಳಿಯುವಾ ಸಂಕಟವ ತಡೆಯಲಾರೆ
ಗೆಲುವಿಂದ ನೀ ಉಬ್ಬಿ ಬೀಗಿದರೆ
ಸೋಲು ಕಂಡಾಗ ಮತಿ ಭ್ರಮಣೆ
ಎಚ್ಚೆತ್ತಿಕೋ ಮನವೆ ಸೋಲಿಂದ ಕಂಗೆಡದೆ
ಸೋಲು ಗೆಲುವೆಂಬುದು ಬದುಕಿನೆರಡು ಮುಖ
ಸೋಲಿನ ಸರಣಿಯಾ ಮಧ್ಯೆ ಒಮ್ಮೊಮ್ಮೆ
ಪಡೆವ ಗೆಲುವಿಂದ ತುಂಬಿಕೊ ಮನಕೆ ಚೈತನ್ಯ
ಎದುರಿಸು ನೀ ಜೀವನದ ಕಷ್ಟ ಕಾರ್ಪಣ್ಯ 
 

Friday 7 September 2012


ತೊಳಲಾಟ
ಎಲ್ಲ ಇದ್ದರೂ ಇಲ್ಲಿ
ಅದೇನೋ ಕೊರತೆ
ಮನಸಿನ ಮೂಲೆಯಲ್ಲಿ
ಬೇಸರದ ಒರತೆ
ಅದೇನೋ ಚಡಪಡಿಕೆ
ಮಾತಲ್ಲಿ ತಡಬಡಿಕೆ
ಬತ್ತದಾ  ನೀರೀಕ್ಷೆ
ನನ್ನ ಪಾಲಿಗಿದು ಅಗ್ನೀಪರೀಕ್ಷೆ


ಅಂದು-ಇಂದು
ಅಂದು ನೀನಿದ್ದೆ ಬಳ್ಳಿಯೂ ನಾಚುವಂತೆ
ಇಂದೇಕೆ ಆದೆ ಕುಂಬಳ ಕಾಯಿಯಂತೆ
ಅಂದಾಗಿದ್ದೆ ನೀ ಏಳು ತೂಕದ ಮಲ್ಲಿಗೆ
ಇಂದು ಕೈ ಹಿಡಿದು ಹೇಳಬೇಕು
ಏಳು..ತೂಕವೆ ಮೆಲ್ಲಗೆ
ಅಂದು ನಿನ್ನ ಕಂಠ ಕೇಳಿ ಕರ್ಣ ಪಾವನ
ಇಂದೇಕೋ ಅನಿಸುತಿದೆ ಗಾರ್ಧಬ ಗಾಯನ
ಅಂದೆನಿಸಿತ್ತು ಬದುಕು ಸುಂದರ ಕವನ
ಇಂದು ನಾನಾಗಿರುವೆ ಜಂಜಾಟದಲಿ ಹೈರಾಣ
(ಸ್ನೇಹಿತರೆ ಇದು ಬರಿ ಹೆಂಗಸರಿಗಷ್ಟೆ ಅನ್ವಯವಾಗಲ್ಲ ಗಂಡಸರಿಗೂ ಅನ್ವಯವಾಗುತ್ತದೆ)

Saturday 1 September 2012

ನೀರೀಕ್ಷೆ
ನನ್ನ ನೆನಪಲಿ ಒಮ್ಮೆ
ಬರಲಾರೆಯ ಗೆಳೆಯಾ
ಬವಬಂಧಗಳ ಸರಿಸಿ
ನೀ ಬಳಿ ಸಾರಲಾರೆಯ
ಬೇಡವೆಂದರೂ ಈ ಹುಚ್ಚುಮನ
ರಚ್ಚೆ ಹಿಡಿದು ತಾ ರೋಧಿಸಿದೆ
ಕಣ್ಣೆರಡು ಕಾತರಿಸಿ
ಕೊಳವಾಗಿ ಹರಿಯುತಿದೆ
ಯಾಕಿಂತ ಮೌನ
ಕಲ್ಲಾಯಿತೆ ಹೃದಯ
ಕಿವಿಗೊಟ್ಟು ಆಲಿಸಲು ಕಾಡುತಿದೆ
ಕರಗಿಬಿಡುವೆನೆಂಬ ಭಯ
ಬೇಡ ಈ ಮುಖವಾಡ
ಕಿತ್ತೆಸೆದು ತೋರು ನೈಜತೆಯ
ಒಮ್ಮೆ ಹಿಂತಿರುಗಿ ನೋಡು
ನೀ ನಡೆದ  ಹಾದಿಯ
ಬೆಂಡಾಗಿ ಬಸವಳಿದು ಕಾಯುತಿಹೆ
ಹಗಲಲ್ಲಿ ಕಾಣೋ ಚಂದ್ರನಾ ಶವದಂತೆ
ತಂಗಾಳಿಯಂತೆ ನೀ ಬಂದು ಮುಖತೋರು
ಸತ್ತ ಕನಸಿಗೆ ನೀ ಮರುಜನ್ಮ ನೀಡು