Wednesday 28 August 2013

ಹೀಗೇಕೆ ...

ನೇರ ಸರಳತೆಯಲಿ ಬದುಕಬೇಕೆನ್ನುವ ಮನಕೆ
ಬಲವಂತದಾ ಮುಖವಾಡ
ತರುವದದೆಷ್ಟು ಕಷ್ಟ..

ಕಿತ್ತೊಗೆಯ ಬೇಕೆನ್ನುವ ಹಠ ಒಂದೆಡೆ
ತೆಗೆದರಾಗುವ ಅನಾಹುತಕೆ
ಭಯದ  ಹುತ್ತ ಮತ್ತೊಂದೆಡೆ

ರೋಷದ ತುಡಿತದಲಿ ಕೈ ಮುಂದೆ ನುಗ್ಗುತಿರೆ
ವಿವೆಕತೆಯ ಪಾಠ ನಡುಗಿಸಿ ತಳ್ಳುತಿದೆ ಹಿಂದೆ
ಗಹಗಹಿಸಿದೆ ಅಸಹಾಯಕ ಅಂತರಾತ್ಮ

ಈ ನ್ಯಾಯ ಹೆಣ್ಣಿಗೊಂದೇ ಏಕೆ, ಆಧುನಿಕ ಯೋಚನಾಲಹರಿ
ಹೆಣ್ಣು ಎಷ್ಟೇ ಮೆರೆದರೂ ಅವಳಬಲೆ ಅನ್ನೋ ಪುರಾತನ ತತ್ವ
ದ್ವಂದ್ವದಾ ಮನಸಿನಲಿ ಸರಿತಪ್ಪುಗಳ ತರ್ಕ

ಹೆಜ್ಜೆ ಮುಂದಿಟ್ಟರೆ ಹೆಮ್ಮಾರಿಪಟ್ಟ ಹಿಂದಿಡಲು ತಡೆವಾ  ಸ್ವಾಭಿಮಾನದ ಕಟ್ಟ
ಮುಂದೆಸಾಗದ,ಹಿಂತಿರುಗದ ಒಂಟಿಕಾಲಿನ ಪಯಣ
ಸೆಳೆದೊಯ್ಯಬಹುದೇ ಆಧ್ಯಾತ್ಮದ ಕಡೆಗೆ..

Tuesday 13 August 2013

ಹೀಗೊಂದು ಮನವಿ (ನಲ್ಲನಿಗೆ)
ಈ ಲೋಕದಲಿ ಎಲ್ಲದಕೂ
ಅಡೆತಡೆಯಾದರೇನಂತೆ ನಲ್ಲ
ಕನಸಿನ ರಾಜ್ಯದಲಿ
ಇದಾವುದೂ ಇರುವದೇ ಇಲ್ಲ
ನೀ ಬಯಸಿದರೆ ಹೋಗಬಹುದು ಯೌವನಕೆ
ನಾನೂ ಬರಬಹುದು ನಾಚುತ್ತ ನಿನ ಸನಿಹಕೆ
ಇಲ್ಲಾದರುಂಟು ಬದುಕಿನ ಹಲವುಹತ್ತು ಅನಿವಾರ್ಯತೆಯ ನಂಟು
ಅಲ್ಲಾದರೆ ಕರೆದರಷ್ಟೇ ಬಂದುಹೋಗುವವರುಂಟು
ಮತ್ತೇಕೆ ತಡ ಬದುಕೋಣ ಕನಸಲ್ಲಿ ಸ್ವಲ್ಪವಾದರೂ ಸಮಯ
ಸವಿದುಬಿಡೋಣ ಅಲ್ಲಲ್ಲಿ ತಪ್ಪಿ ಕಾಡುವ ರಸಘಳಿಗೆಯ ಕ್ಷಣ