Sunday 29 June 2014

ಇಂದೇಕೋ ನೆನಪಾದ ಕರೀಮ....
ಆಗಿನ್ನು ನಾಲ್ಕನೇ ಕ್ಲಾಸ್ ಓದುತ್ತಿದ್ದೆ. ನಮ್ಮ ಸ್ಕೂಲ್ ಪಕ್ಕದಲ್ಲೇ ಬೆಳೆಸಿದ ಒಂದು ಸಣ್ಣ ಕಾಡು ಇತ್ತು . ಒಂದು ದಿನ ಕಾಡಿನ ಮರವನ್ನೆಲ್ಲ ಒಬ್ಬ ಮುಸ್ಲಿಂ ಸಾಬಿಗೆ ಮಾರಿದರು.ಹಾಗಾಗಿ ಆಲ್ಲಿರುವ ಮರವನ್ನೆಲ್ಲ ಕಡಿಯಲು ಶುರು ಮಾಡಿದರು. ಆ ಕಡಿದ ಮರವನ್ನೂ ಒಯ್ಯೋ ತನಕ ಕಾಯಲೆಂದು ಬಂದ ಆ ಕಪ್ಪು ಹುಡುಗ ಕರೀಮ್. ಹೆಸರಿಗೆ ಅನ್ವರ್ಥಕವಾಗೇ ಇದ್ದ. ಜಾತಿಯಲ್ಲಿ ಬೆಸ್ತರವನು. ಅವನು ಅಲ್ಲೇ ಒಂದು ಗುಡಿಸಲು ಹಾಕಿಕೊಂಡು ಒಬ್ಬನೇ ಇರುತ್ತಿದ್ದ. ನಮ್ಮ ಸ್ಕೂಲ್ ಅಲ್ಲೇ ಇದ್ದದ್ದರಿಂದ ನಾವು ಅಲ್ಲೇ ಆಟ ಆಡ್ತಾ ಇದ್ದದ್ದು. ಆಗೆಲ್ಲ ಅವನು ನಮ್ಮ ಹತ್ತಿರ ಮಾತಾಡುತ್ತಿದ್ದ..ಪಾಪ ಅವನಿಗಾದರೂ ಅಲ್ಲಿನ್ನಾರಿದ್ದಾರೆ ಮಾತಾಡಲು. ಅಕ್ಕ ಪಕ್ಕ ಮನೆಗಳಿಲ್ಲ. ಅವನಿಗೆ ನಾನೂ ಎಂದರೆ ತುಂಬಾ ಪ್ರಿತಿಯಾಗಿತ್ತು.ಯಾಕೆಂದರೆ ನಾನು ಮಧ್ಯಾಹ್ನ ಊಟ ಮುಗಿಸಿ ಬರುವಾಗ ಅವನಿ ಮನೆಯಿಂದ ಸಾಂಬಾರ್ ತಂದು ಕೊಡುತ್ತಿದ್ದೆ . ಅವನು ಒಮ್ಮೊಮ್ಮೆ ನಮ್ಮ ಮನೆ ಅಂಗಳಕ್ಕೆ ಬರುತ್ತಿದ್ದ ಅಣ್ಣಂದಿರ ಬಳಿ ಮಾತಾಡಲು.ಆಗೆಲ್ಲ ಎಲ್ಲಿದ್ದರೂ ನನ್ನ ಕರೆದು ಮಾತಾಡಿಸಿ ಹೋಗುತ್ತಿದ್ದ.ಒಂದು ದಿನ ಸ್ಕೂಲ್ ಇಂದ ಬರುವಾಗ ಕಲ್ಲು ಎಡವಿ ಬಿದ್ದು ಕಾಲು ಮಂಡಿ ತರಚಿ ರಕ್ತ ಜಿನಿಗುತ್ತಿತ್ತು. ನಾನು ಅಳುತ್ತ ಕುಂಟುತ್ತ ನಡೆಯೋದು ನೋಡಿ ಓಡಿ ಬಂದು ಎತ್ತಿಕೊಂಡು ಮನೆ ಅಂಗಳಕ್ಕೆ ಬಿಟ್ಟು ಹೋದ.. ಆದರೆ ಅಮ್ಮ ನನಗೆ ಒಳಗೆ ಬರೋಕೆ ಬಿಡದೆ ಅಯ್ಯೋ ಅವನು ನಿನ್ನ ಎತ್ತಿ ಕರೆತಂದ ಮೊದಲು ಸ್ನಾನ ಮಾಡು ಎಂದು ಬಚ್ಚಲ ಮನೆಗೆ ಅಟ್ಟಿದ್ದು ಇನ್ನು ಹಸಿ ನೆನಪು....ಆಗೆಲ್ಲ ಯಾಕೆ ಹೀಗೆ ಹೇಳ್ತಾರೆ ಎಂದೇ ಅರ್ಥ ಆಗ್ತಿರಲಿಲ್ಲ.. ಪಾಪ ಕರೀಮ ಯಾವತ್ತು ಬೇಜಾರೇ ಮಾಡ್ಕೊಂಡಿಲ್ಲ...ಕೊನೆಗೊಂದು ದಿನ ಮರವನ್ನೆಲ್ಲ ಸಾಗಿಸಿದರು. ಇನ್ನು ನಿನ್ನ ನೋಡೋಕೆ ಆಗಲ್ಲ ಪುಟ್ಟಿ ಎಂದು ಎಷ್ಟೊಂದು ನೇರಳೆ ಹಣ್ಣನ್ನು ನನ್ನ ಕೈಯ್ಯಲ್ಲಿ ಇಟ್ಟು ಹೇಳುವಾಗ ಪಾಪ ಅವನ ಕಣ್ಣಲ್ಲಿ ನೀರಿತ್ತು.....ಇಂತಹ ಪರಿಶುದ್ಧ ಪ್ರೀತಿಗೆ ಜಾತೀಯತೆ ಲೇಪ ಯಾಕಾದರೂ ಹಚ್ಚುತ್ತಾರೋ ತಿಳಿಯದು..ಅಂತರಂಗ ಬಹಿರಂಗ ಶುದ್ದದವನೇ ಮೇಲ್ಜಾತಿಯವನಲ್ಲವೇ?