Friday 17 October 2014

ಶೂನ್ಯದಿಂದಲೇ ಆರಂಭ 
ಶೂನ್ಯದಲ್ಲೇ ಅಂತ್ಯ 
ಶೂನ್ಯದಲ್ಲೇ ನಿನ್ನಿರುವಯ್ಕ್ಯತೆಯಿರುವಾಗ 
ಶೂನ್ಯದಲ್ಲೆನಿದೆಯೆಂದೆಣಿಸದಿರು ಮನವೇ..........ಕೀಮ.

Thursday 16 October 2014

ಓಡುತಿರುವ ಓ ಮೇಘಗಳೆ ತುಸು ನಿಲ್ಲಿ ಅಲ್ಲೇ 
ಕಳುಹಿಸಬೇಕಿದೆ ನನ್ನೆದೆಯ ಬೆಚ್ಚನೆಯ ಭಾವಗಳ 
ನನ್ನವನಿರುವೆಡೆಗೆ....
ಜತನದಲಿ ಸಲಹಿರುವೆ ಅವನ ಪ್ರೀತಿಯನು 
ಇಂದೇಕೋ ತಡೆಯದಾಗಿಹೆ ನನ್ನ ಭಾವವನು 
ಹೊತ್ತೊಯ್ದು ತಲುಪಿಸಿರಿ ಅವನೆದಯ ಗೂಡಿಗೆ ....
ಹಾಗೆಯೇ ಸುರಿಸಿಬಿಡಿ ನಾಲ್ಕು ಹನಿ ಮಳೆ ನೀರು
ನೆನೆಪಾಗಲಿ ಅವಗೆ ನನ್ನ ಮೌನದ ಕಣ್ಣೀರು
ನೋವೆಲ್ಲ ನನಗಿರಲಿ ನಲಿವಿರಲಿ ಅವಗೆ......ಕೀಮ

Monday 6 October 2014

ಮುಸುಕಿನಿಂದ ಬೆಳಕಿಗೆ

ತುಂತುರು ಮಳೆ, ಛಳಿ ಗಾಳಿಯಲ್ಲಿ ಒಂದು ಸಣ್ಣ ಬೆಟ್ಟದ ತಪ್ಪಲಲ್ಲಿರುವ ಕೋಟೆಯಂತಿರುವ ಆಶ್ರಮಕ್ಕೆ ಬಂದು ತಲುಪಿದಳು.ಬಹಳಷ್ಟು ಕೊತುಹಲ,ಅಂಜಿಕೆ ಹಾಗೂ ಏನೋ ಅಸ್ಪಷ್ಟ ತವಕ ಅವಳನ್ನು ಕಾಡುತಿತ್ತು.ಬಹಳ ದಿನಗಳ ಆಸೆ,ಹಲವು ಘರ್ಷಣೆಗಳ ಅಂತ್ಯ ಈ ಪ್ರಯಾಣವಾಗಿತ್ತು.ಅಲ್ಲಿಯ ಹೆಬ್ಬಾಗಿಲಿನತ್ತ ಬಂದಾಗ, ಒಂದು ಕ್ಷಣ ಹಿಂದಿನ ನೆನಪಾಯಿತು.ಧ್ಯಾನ,ಪ್ರಾಣಾಯಾಮ,ಗುರುವಿನ ಭಾವ ಚಿತ್ರ,ಪವಾಡಗಳ ಬಗ್ಗೆ ಪ್ರವಚನ,ಭಜನೆಗಳಲ್ಲಿ ತಲ್ಲೀನವಾದ ಕ್ಷಣಗಳೆಲ್ಲಾ ಕಣ್ಣಮುಂದೆ ಒಮ್ಮೆ ಹಾದು ಹೋದವು.ಅಸಹಾಯಕತೆಗೆ ಅಂತ್ಯ ಹೇಳುವ ಕ್ಷಣ ಬಂತೆಂದು ಹರ್ಷಿಸಿದಳು.
ಆಶ್ರಮದ ವಾತಾವರಣ ಬಹಳ ಸುಂದರವಾಗಿತ್ತು.ಮರ ಗಿಡಗಳು,ಜರಿ ತೊರೆಗಳು ಹಾಗೂ ಬ್ರಹತ್ ಧ್ಯಾನ ಮಂದಿರ ಅವಳ ಮನ ಗೆದ್ದಿತ್ತು.ಮಾಯಾ ಜಗತ್ತಿನಲ್ಲಿ ತಲ್ಲೀನಳಾದಳು. ಭೋಜನದ ವೇಳೆ ಅಲ್ಲಿಯ ವಾಸಿಗಳು ಒಂದು ಸುಂದರ ಕಟ್ಟಡದಲ್ಲಿ ಬಗೆ ಬಗೆಯ ಖಾದ್ಯಗಳನೊಳಗೊಂಡ ಊಟ ಬಡಿಸಿದರು.ನಂತರ ಬೆಟ್ಟದ ಮೇಲಿರುವ ಒಂದು ವೈವಿದ್ಯಮಯ ಕಲ್ಲುಗಳ ಮಂಟಪಕ್ಕೆ ಕರೆದೊಯ್ದು ಧ್ಯಾನ ಮಾಡಲು ಹೇಳಿದರು. ಧ್ಯಾನದ ಬಳಿಕ ಒಂದು ಚಿಕ್ಕ ಕುಟೀರದ ಬಳಿ ಕರೆದುಕೊಂಡು ಹೋದರು.ಅಲ್ಲಿ ನೂರಾರು ಭಕ್ತರು ಭಜನೆಯಲ್ಲಿ ತಲ್ಲೀನರಾಗಿದ್ದರು.ಅವಳೂ ಅವರೊಂದಿಗೆ ಧ್ವನಿ ಗೂಡಿಸಿ ಗುರುವಿನ ದರುಶನಕ್ಕಾಗಿ ಕಾಯ ತೊಡಗಿದಳು.
ಎಷ್ಟೋ ಸಮಯದ ನಂತರ ಜಯಕಾರಗಳ ಧ್ವನಿ ಅವಳನ್ನ ಎಚ್ಚರಿಸಿತು.ತಾನು ಬಂದ ಮಹದ್ದೊದೇಶ ಅವಳನ್ನ ವಾಸ್ತವಕ್ಕೆ ತಂದಿತು. ಉದ್ದನೆಯ ಶಲ್ಯವನ್ನು ಮೈಗೆರಸಿ ಬಿಸುವ ಗಾಳಿ ಮಳೆಯಲ್ಲಿ ಜಯ ಘೋಶ ಮತ್ತು ಜನಗಳ ಮಧ್ಯದಲ್ಲಿ ನಿಧಾನವಾಗಿ ಭಕ್ತ ಸಮೂಹದೆಡೆಗೆ ಕೈ ಬೀಸುತ್ತಾ ,ಗುಂಪಿನಲ್ಲಿ ಹಲವರ ತಲೆಸವರಿ ಪ್ರವಚನ ಮಾಡುವ ಸ್ಥಳಕ್ಕೆ ಗುರುಗಳು ಪಾದ ಬೆಳೆಸಿದರು.ದೀರ್ಘ ಪ್ರವಚನಕ್ಕೆ ಭಕ್ತರು ಪರವಶರಾದರು.ಆದರೆ ಅವಳಿಗೆ ಅದೆಲ್ಲಾ ಬರೇ ಮಾತುಗಳಾಗಿದ್ದವು. ಗುರುವಲ್ಲಿ ತನ್ನ ನೋವನ್ನು ಹೇಳಿಕೊಂಡು ತನ್ನ ಸಮಸ್ಯೆಗೆ ಅದ್ಭುತವಾದ ಪರಿಹಾರ ಸಿಗುವದೆಂಬ ನಂಬಿಕೆಯಲ್ಲಿ ಬಂದಿದ್ದಳು. ಪ್ರವಚನದ ನಂತರ ಗುರುವನ್ನು ಭಕ್ತರು ಮುತ್ತಿಗೆ ಹಾಕಿದರು.ನೂಕು ನುಗ್ಗಲಲ್ಲಿ ಅವರ ಬಳಿ ಹೋಗಿ ತನ್ನ ನೋವನ್ನು ಕಣ್ಣೀರಿಟ್ಟು ಅರಿಕೆ ಮಾಡಿಕೊಂಡಳು. ಗುರುವು
ಹುಂ ಎಂದು ಎದ್ದು ಮುಂದೆ ಸಾಗಿದರು. ಆ ಕ್ಷಣದಲ್ಲಿ ಅವಳಿಗೆ ತನ್ನ ಅಸಹಾಯಕತೆ ಹಾಗೂ ಮುಗ್ಧ ನಂಬಿಕೆಯ ಬಗ್ಗೆ ಅರಿವಾಯಿತು.ಶಾಂತಿ,ಪ್ರೀತಿಯ ದೂತ,ಅಪಾರ ಪವಾಡಗಳ ಶಿಲ್ಪಿ,ನಡೆದಾಡುವ ಸಾಕ್ಷಾತ್ ದೇವರು ಅಂದದ್ದೆಲ್ಲ ಬರಿ ಜಾಹಿರಾತು.ತನ್ನಂತರಂಗದ ಸಮಸ್ಯೆಗಳಿಗೆ ತಾನೇ ಜವಾಬ್ದಾರಿ,ತನ್ನ ನೋವುಗಳಿಗೆ ಪರಿಹಾರ ನನ್ನ ಮನಸ್ಸಲ್ಲೇ ಹುಡಕಬೇಕು. ತನ್ನೊಡನೆ ತನ್ನ ಆಧಾರಕ್ಕೆ ತನ್ನ ಕುಟುಂಬವೆಂಬುದು ಅರಿವಾಯಿತು.ನಿಧಾನವಾಗಿ ಕಣ್ಣೊರೆಸುತ್ತಾ ದೂರದಲ್ಲಿ ನಿಂತಿದ್ದ ಗಂಡ,ಮಗನೆಡೆಗೆ ಕಾಲಿಟ್ಟಳು.ಮಂಜು ಮುಸುಕಿನಿಂದ ಶುಭ್ರ ಬೆಳಕಿನೆಡೆಗೆ ಹೋದ ಅನುಭವವಾಯಿತು. ಓಡಿ ಹೋಗಿ ಮಗುವನ್ನು ತಬ್ಬಿಕೊಂಡಳು.ತಾ ಪಡೆದದ್ದೇ ತನ್ನ ಭಾಗ್ಯ,ತನ್ನವರೇ ತನ್ನ ಸರ್ವಸ್ವವೆಂದುಕೊಂಡು ಆ ಮಾಯಾ ಲೋಕದಿಂದ ತನ್ನೂರಿಗೆ ಹಿಂತಿರುಗಿದಳು.
                                   


ತಾನೊಂದು ಬಗೆದರೆ.......

ರಾಜೇಶನದು ಸುಂದರ ದಾಂಪತ್ಯ.ಮನ ಮೆಚಿದ್ದ ಮಡದಿ ಸ್ವಾತಿ.ಒಳ್ಳೆಯ ಉದ್ಯೋಗದಿಂದಾಗಿ ಕೈತುಂಬಾ ಸಂಬಳ,ಕಾರು ಬಂಗಲೆ ಎಲ್ಲ ಇದ್ದ ಶ್ರೀಮಂತ ಜೀವನ.ಕೊರತೆಯೊಂದೆ ಮದುವೆಯಾಗಿ ಹತ್ತು ವರುಷ ಕಳೆದರೂ ಅವರ ಹೆಸರು ಹೇಳೋ ವಂಶದ ಕುಡಿ ಮೂಡದಿರುವದು.
ಸ್ವಾತಿಗಾದರೋ ಮಕ್ಕಳುಎಂದರೆ ಪಂಚಪ್ರಾಣ.ದಿನಾಲೂ ಸಾಯಂಕಾಲ ತಮ್ಮ ಮನೆಯಿದಿರು ಇರುವ ಉದ್ಯಾನದಲ್ಲಿ ಆಡುವ ಮಕ್ಕಳನ್ನು ಕಿಟಕಿಯಿಂದ ಗಂಟೆಗಟ್ಟಲೇ ನೋಡುತ್ತಾ ಮೈಮರೆಯುತ್ತಿದ್ದಳು. ಆದರೂ ರಾಜೇಶನ ಮನಸ್ಸಿಗೆ ಬೇಸರವಾಗಬಾರದೆಂದು ತನ್ನ ನೋವನ್ನು ಅಡಗಿಸಿ ಸತ್ತ ನಗುವಿಗೆ ಜೀವತುಂಬೊ ಪ್ರಯತ್ನ ಮಾಡುತ್ತಿದ್ದಳು.ಮಡದಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ರಾಜೇಶನಿಗೆ ಪತ್ನಿಯ ನಗುವಿನ ಹಿಂದಿರುವ ನೋವನ್ನು ಅರಿಯುವದು ಕಷ್ಟವಾಗಿರಲಿಲ್ಲ. ಹೀಗಿರುವಾಗ ಒಂದು ದಿನ ರಾಜೇಶ ಒತ್ತಾಯ ಮಾಡಿ ಹೆಂಡತಿಯನ್ನ ವೈದ್ಯರ ಬಳಿ ಕರೆದೊಯ್ಯುತ್ತಾನೆ. ಇಬ್ಬರನ್ನು ಪರೀಕ್ಷಿಸಿದ ವೈದ್ಯರ ರಿಪೋರ್ಟ್ ಹೇಳಿದ್ದು ತೊಂದರೆ ಇರೋದು ರಾಜೆಶನಲ್ಲಿ ಎಂದು. ಎಷ್ಟೇ ಚಿಕಿತ್ಸೆ ಮಾಡಿಸಿದರೂ ಯಾವ ಪ್ರಯೋಜನವೂ ಆಗುವದಿಲ್ಲ. ರಾಜೇಶನಿಗೆ ಮನಸ್ಸಿನಲ್ಲಿ ಅಪರಾಧಿ ಪ್ರಜ್ಞೆ ಕಾಡುತ್ತದೆ. ತನ್ನ ಸರ್ವಸ್ವವನ್ನು ದಾರೆಯೆರೆದು ತನ್ನ ಜೀವನವನ್ನು ಸ್ವರ್ಗ ಮಾಡಿದ ಹೆಂಡತಿಯ ಒಂದೇ ಒಂದು ಬಯಕೆಯನ್ನ ಈಡೇರಿಸುವಲ್ಲಿ ನಾನು ಸೋತುಹೋದೆ ಎಂದು ಅವನ ಮೇಲೆ ಅವನಿಗೆ ಬೇಸರ ಮೂಡುತ್ತದೆ. ಹೇಗಾದರೂ ತನ್ನ ಹೆಂಡತಿಯ ಆಸೆಯನ್ನ ಪೂರೈಸಲೇ ಬೇಕೆಂದು ನಿರ್ಧರಿಸಿದ. ಆಗ ಅವನಿಗೆ ನೆನಪಾದದ್ದು ತನ್ನ ಜೀವದ ಗೆಳೆಯ ಅವಿವಾಹಿತ ಶ್ಯಾಮ್. ಅವನ ಬಳಿ ಹೋಗಿ ತನ್ನ ಮನಸ್ಸಿನ ನೋವನ್ನೆಲ್ಲ ಎಳೆಎಳೆಯಾಗಿ ಬಿಚ್ಚಿಟ್ಟು ನನ್ನ ಹೆಂಡತಿಯ ಮೊಗದಲ್ಲಿ ನಗು ಚಿಮ್ಮುವಂತೆ ಮಾಡುವ ಕೆಲಸ ನಿನ್ನದು ಎಂದು ವಿನಂತಿಸಿದ. ಮೊದಲು ಒಪ್ಪದ ಶ್ಯಾಮ್ ಕೊನೆಯಲ್ಲಿ ಸ್ನೇಹಕ್ಕೆ ಮಣಿದು ಒಪ್ಪಿಕೊಂಡ. ಗೆಳೆಯನನ್ನೇನೋ ಒಪ್ಪಿಸಿಯಾಯ್ತು ಆದರೆ ಹೆಂಡತಿಯನ್ನು ಒಪ್ಪಿಸೋದು ಹೇಗೆ ಎಂದು ಚಿಂತಿತನಾದ. ಒಂದು ದಿನ ಗಟ್ಟಿ ಮನಸ್ಸಿಂದ ಉದ್ಯೋಗಕ್ಕೆ ರಜಾ ಹಾಕಿ ಹೆಂಡತಿಗೆ ತನ್ನ ಯೋಚನೆಯನ್ನ  ಅರುಹಿದ. ವಿಷಯ ಕೇಳಿ ಹೆಂಡತಿ ಕೆಂಡಾಮಂಡಲವಾದಳು. ಅವಳನ್ನ ರಮಿಸುತ್ತಾ ಇದಕ್ಕೆ ನೀನು ಒಪ್ಪಲೇ ಬೇಕೆಂದಾಗ ಹೆಂಡತಿ ಕೋಪದಲ್ಲಿ ಅವನಿಂದಲೂ ನನಗೆ ಮಕ್ಕಳಾಗದಿದ್ದರೆ ಇನ್ನೆಷ್ಟು ಜನರಿಗೆ ನನ್ನನ್ನು ಒಡ್ಡುವಿರಿ ಎಂದು ಮನಚುಚ್ಚುವಂತೆ ಪ್ರಶ್ನಿಸುತ್ತಾಳೆ.ಕೋಪ ನೋವು,ಅಪಮಾನದಿಂದ ಕಣ್ಣೀರಿಡುತ್ತಿರುವ ಹೆಂಡತಿಯನ್ನ ಒಪ್ಪಿಸುವದು ಸುಲುಭದ ಕೆಲಸವಾಗಿರಲಿಲ್ಲ.ಅವಳಿಗೆ ಮಹಾಭಾರತದ ಕುಂತಿಯ ಕಥೆ,ಪಾಂಚಾಲಿಯ ಕಥೆ ಹೀಗೆ ಹಲವು ಹತ್ತು ಉದಾಹರಣೆ ಕೊಟ್ಟು ಅವಳ ಮನವೊಲಿಸುವಲ್ಲಿ ಯಶಸ್ವಿಯಾಗುತ್ತಾನೆ.ನೀನು ಇದಕ್ಕೆ ಒಪ್ಪದಿದ್ದರೆ ನಿನ್ನ ತಾಯ್ತನದ ಸೌಭಾಗ್ಯವನ್ನ ಕಿತ್ತುಕೊಂಡೆ ಎಂಬ ಕೊರಗಿನಲ್ಲೇ ನಾನು ಜೀವನ ಸವೆಸಬೇಕಾಗುತ್ತದೆ.ಎಂದು ಪರಿಪರಿಯಾಗಿ ತಿಳಿ ಹೇಳಿದ.

ಈಗ ಅವನ ತಲೆಯಲ್ಲಿ ಇವರಿಬ್ಬರನ್ನು ಒಂದುಗೂಡಿಸುವ ಪರಿ ಹೇಗೆಂಬ ಯೋಚನೆ ಸುತ್ತತೊಡಗಿತು. ಎಷ್ಟೇ ಮನ ಒಲಿಸಿದರೂ ನನ್ನ ಉಪಸ್ಥಿತಿಯಲ್ಲಿ ಕಂಡಿತಾ ನನ್ನ ಹೆಂಡತಿ ಒಪ್ಪುವದಿಲ್ಲ,ಶ್ಯಾಮನಿಗೂ ಕಷ್ಟ ಅದಕ್ಕಾಗಿ ಇವರಿಬ್ಬರನ್ನೇ ಬಿಟ್ಟು ಎಲ್ಲಾದರೂ ಹೋಗಬೇಕು ಎಂದು ನಿರ್ಧರಿಸಿದ. ಅದಕ್ಕೆ ದೇವರೇ ದಾರಿ ತೋರಿದಂತೆ ಅವನಿಗೆ ಕಚೇರಿಯಿಂದ ಬೇರೆ ಊರಿಗೆ ವರ್ಗಾವಣೆಯಾಗಿತ್ತು. ಹೆಂಡತಿಗೆ ತನ್ನ ವರ್ಗಾವಣೆ ವಿಚಾರ ತಿಳಿಸಿ ತಾನು ಮೊದಲು ಅಲ್ಲಿ ಹೋಗಿ ಎಲ್ಲ ವ್ಯವಸ್ಥೆಮಾಡಿ ನಿನ್ನನ್ನು ಕರೆದೊಯ್ಯುತ್ತೇನೆ ಎಂದು ಹೇಳಿ ಸ್ವಾತಿಯನ್ನೊಬ್ಬಳನ್ನೇ  ಮನೆಯಲ್ಲಿ ಬಿಟ್ಟು ತನ್ನ ಗೆಳೆಯ ಶ್ಯಾಮನಿಗೆ ಬಂದು ಸ್ವಾತಿ ಜೊತೆ ಇರುವಂತೆ ಹೇಳಿ ಹೊರಡುತ್ತಾನೆ. ಹೊರಟುನಿಂತ ರಾಜೇಶನಿಗೆ ಹೃದಯವೇಕೋ ಭಾರ ಅನಿಸುತ್ತಿತ್ತು.ಕಣ್ಣಿನ ಆಳದಲ್ಲಿ ತಿಳು ನೀರಿನ ಪೊರೆಯಿತ್ತು.ಆದರೂ ಏನನ್ನು ತೋರಗೊಡದೆ ಇದು ತನ್ನದೇ ನಿರ್ಧಾರ,ಸ್ವಾತಿ ನಿರಪರಾಧಿ ಎಂದು ಗಟ್ಟಿ ಮನಸ್ಸು ಮಾಡಿ ಹೆಂಡತಿಯ ಹಣೆಗೆ ಚುಂಬಿಸಿ ಹೊರಟ.ಸ್ವಾತಿಗೋ ಹೃದಯವೇ ಕಿತ್ತು ಬಾಯಿಗೆ ಬಂದ ಅನುಭವ.ಕಣ್ಣಲ್ಲಿ ಧಾರಾಕಾರ ನೀರು ಸುರಿಯುತ್ತಿತ್ತು. ರಾಜೇಶ ಹೊಸ ಪರಿಸರದಲ್ಲಿ,ಕೆಲಸದಲ್ಲಿ ತನ್ನನ್ನೆ ತಾನು ಮರೆತ. ಅಲ್ಲಿಯ ಅತೀ ಕೆಲಸದಿಂದ ಅವನಿಗೆ ಬೇಗನೆ ಹಿಂದಿರುಗಲು ಆಗಲಿಲ್ಲ .

ಶ್ಯಾಮ್ ಗೆಳೆಯನಿಗೆ ಮಾತುಕೊಟ್ಟಂತೆ ಹದಿನೈದು ದಿನ ಸ್ವಾತಿ ಜೊತೆ ಇದ್ದು ಹೊರಟು ಹೋಗುತ್ತಾನೆ ಸ್ವಾತಿ ತನ್ನ ತಾಯಿ ಮನೆಗೆ ಹೋಗಿ ಅವರ ಜೊತೆ ಇರುತ್ತಾಳೆ. ಹೀಗೆ ಒಂದೂವರೆ ತಿಂಗಳು ಕಳೆದಾಗ ಸ್ವಾತಿ ಗರ್ಭಿಣಿ ಎಂದು ವೈದ್ಯರ ಪರೀಕ್ಷೆಯಿಂದ ತಿಳಿದುಬರುತ್ತದೆ. ವಿಷಯವನ್ನ ರಾಜೇಶ್ ಗೆ ಫೋನ್ ಮೂಲಕ ತಿಳಿಸುತ್ತಾಳೆ. ಸಂತೋಷಗೊಂಡ ರಾಜೇಶ್ ಹೆಂಡತಿ ನೋಡಲು ಬರುತ್ತಾನೆ.ಜೊತೆಗೆ ಶ್ಯಾಮ್ ಗೂ ವಿಷಯ ತಿಳಿಸುತ್ತಾನೆ.  ಗರ್ಭಿಣಿ ಯರ ಸಹಜ ಸುಸ್ತು ಮತ್ತು ಮನದ ಮೂಲೆಯಲ್ಲೆಲ್ಲೋ ತಪ್ಪಿತಸ್ಥ ಭಾವನೆ ಎಲ್ಲವೂ ಸೇರಿ ಸ್ವಾತಿ ತುಂಬಾನೇ ನಿಶ್ಯಕ್ತಳಾಗಿದ್ದಳು. ರಾಜೇಶ್ ಎರಡು ದಿನ ಅವಳ ಜೊತೆಗೆ ಇದ್ದು ವಾಪಸ್ ಊರಿಗೆ ಹೊರಡುತ್ತಾನೆ.ಹಾಗೂ ಹೀಗೂ ನವ ಮಾಸಗಳು ತುಂಬಿ ನಿರೀಕ್ಷೆಯ ಕ್ಷಣಗಳು ಹತ್ತಿರ ಬಂದೇ ಬಿಡುತ್ತವೆ. ಶ್ಯಾಮ್ ಗೆ ಯಾಕೋ ಮನದಲ್ಲಿ ಗೊಂದಲ. ತಾನು ಇನ್ನು ಯಾವದೇ ಕಾರಣಕ್ಕೂ ರಾಜೇಶ್ ಮತ್ತು ಸ್ವಾತಿ ಬಾಳಲ್ಲಿ ಅಡ್ಡ ಬರಬಾರದು ಅವರು ಸಂತೋಷವಾಗಿರಬೇಕು ಎಂದು ತನ್ನ ಕೆಲಸಕ್ಕೆ ರಾಜಿನಾಮೆ ಕೊಟ್ಟು ವಿದೇಶಕ್ಕೆ ಹೊರಡಲು ಸಿದ್ಧನಾಗುತ್ತಾನೆ. ಹೋಗುವಾಗ ಒಮ್ಮೆ ರಾಜೇಶ ಗೆ ಕೊನೆವಿದಾಯ ಹೇಳಿ ಹೋಗೋಣ ಅಂತ ರಾಜೇಶನನ್ನು ಕಾಣಲು ಬರುತ್ತಾನೆ. ಇಬ್ಬರೂ ಮಾತನಾಡುತ್ತ ಹೋಟೆಲೊಂದರಲ್ಲಿ ಊಟ ಮುಗಿಸಿ ಇನ್ನೇನು ಹೊರಡಬೇಕೆನ್ನುವಾಗ ರಾಜೇಶನಿಗೆ ಸ್ವಾತಿಯ ತಂದೆಯಿಂದ ಫೋನ್ ಕರೆ ಬರುತ್ತದೆ. ಅವಳ ತಂದೆ  ಸ್ವಾತಿಗೆ ಹೆರಿಗೆ ನೋವು ಬಂದಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ವಿಷಯ ತಿಳಿಸುತ್ತಾರೆ. ಆಗ ಶ್ಯಾಮ್ ತನ್ನ ಕಾರ್ ಅಲ್ಲೇ ರಾಜೇಶ್ ನನ್ನು ಬಸ್ ನಿಲ್ದಾಣಕ್ಕೆ ಬಿಡುತ್ತೇನೆ ಎಂದು ಹೇಳಿ ಇಬ್ಬರೂ ಕಾರಲ್ಲಿ ಹೊರಡುತ್ತಾರೆ.ಆದರೆ ಇವರ ಸ್ನೇಹ ನೋಡಿ ಆ ದೇವರಿಗೂ ಅಸೂಯೆ ಆಯ್ತೇನೋ ಎಂಬಂತೆ ಎದುರಲ್ಲಿಯ ವಾಹನವೊಂದು ಇವರ ಕಾರಿಗೆ ಗುದ್ದಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತರಾಗುತ್ತಾರೆ. ಇತ್ತ ಸ್ವಾತಿಗೆ ಹೆರಿಗೆನೋವು ಜಾಸ್ತಿ ಆಗುತ್ತದೆ. ವೈದ್ಯರು ಸ್ವಾತಿ ತಂದೆಯ ಬಳಿ ಬಂದು ಸ್ವಾತಿಯ  ಸ್ಥಿತಿ ತುಂಬಾ ಗಂಭೀರವಾಗಿದ್ದು ಹೊಟ್ಟೆಯಲ್ಲಿ ಅವಳಿ ಮಕ್ಕಳಿದ್ದ ಕಾರಣ ಒಂದೋ ತಾಯಿ ಅಥವಾ ಮಕ್ಕಳು ಬದುಕುತ್ತಾರೆ ಎಂದು ಒಪ್ಪಿಗೆ ಪತ್ರ ಬರೆಸಿಕೊಳ್ಳುತ್ತಾರೆ. ಅಂತು ಕಷ್ಟದಲ್ಲಿ ಸ್ವಾತಿ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾಳೆ.ಆದರೆ ಇಬ್ಬರೂ ಮಕ್ಕಳಲ್ಲಿ ಯಾವದೇ ಚಲನೆ ಇಲ್ಲದೆ ಇರುವದನ್ನು ಕಂಡು  ತತ್ತರಿಸಿದ ಸ್ವಾತಿ ತಂದೆಗೆ ಇನ್ನೊಂದು ಶಾಕ್ ಕಾದಿರುತ್ತದೆ.ಅವರ ಮೊಬೈಲ್ ಗೆ ಪೋಲಿಸ್ ಕರೆ ಮಾಡಿ ರಾಜೇಶ್ ಮತ್ತು ಶ್ಯಾಮ್ ಅಪಘಾತ ದಲ್ಲಿ ತೀರಿ ಹೋದ ವಿಷಯ ತಿಳಿಸುತ್ತಾರೆ.ಅವರು ತಡೆಯಲಾರದ ನೋವಿನಿಂದ ಕುಸಿಯುತ್ತಾರೆ.ಅದೇ ಸಮಯಕ್ಕೆ ಸತ್ತಂತಿದ್ದ ಎರಡು ಮಕ್ಕಳೂ ಒಮ್ಮೆಲೇ ಕಾಲನ್ನು ಅಲ್ಲಾಡಿಸುತ್ತ ಕೂಗುತ್ತವೆ.

ಮಾರನೆ ದಿವಸ ವಿಷಯ ತಿಳಿದ ಸ್ವಾತಿಯ ಅಳು ಮುಗಿಲು ಮುಟ್ಟುತ್ತದೆ ಆದರೆ ಎಷ್ಟು ಅತ್ತರೂ ಹೋದವರು ತಿರುಗಿ ಬರಲಾರರು ಅಲ್ಲವೇ? ಸ್ವಾತಿ ನಿಧಾನಕ್ಕೆ ತನ್ನ ಮಕ್ಕಳ ಆಟ ಲೀಲೆ ಗಳನ್ನು  ನೋಡಿ ದುಃಖ ಕಡಿಮೆ ಮಾಡಿಕೊಳ್ಳುತ್ತಾಳೆ. ಜೀವದ ಗೆಳೆಯರಾದ ರಾಜೇಶ್ ಶ್ಯಾಮ್ ಸಾವಿನಲ್ಲೂ ಒಂದಾಗಿ  ತನ್ನ ಮಕ್ಕಳಲ್ಲೇ ಸೇರಿದ್ದಾರೆ ಎಂದು ಸ್ವಾತಿ ಭಾವಿಸುತ್ತಾಳೆ.





ನಾಳೆ ಗಣೇಶನ ಹಬ್ಬ..ನಾವು ಹಬ್ಬ ಆಚರಿಸೋ ಮುನ್ನ ಗಣೇಶನ ದೇಹ ರಚನೆ ಕುರಿತು ಸ್ವಲ್ಪ ತಿಳ್ಕೊಂಡ್ರೆ ಇನ್ನು ಹೆಚ್ಚಿನ ಭಕ್ತಿ..ಸಂತೃಪ್ತಿ....ಇದು ಶ್ರೀ ಶ್ರೀ ರವಿಶಂಕರ ಗುರೂಜಿಯವರ ಪ್ರವಚನದ ಸಾರಾಂಶ ...ನನಗೆ ತಿಳಿದದ್ದನ್ನ ಬರಿತಿದ್ದೀನಿ..ತಪ್ಪಿದ್ದರೆ ಯಾರಾದ್ರೂ ತಿಳಿದವರು ಇದ್ದರೆ ಅವರ ಅಭಿಪ್ರಾಯ ತಿಳಿಸಿ..ನಾನೂ ಹೆಚ್ಚಿನದನ್ನ ತಿಳ್ಕೋತೀನಿ..
ಗಣೇಶ ಅಂದರೆ ಮನುಷ್ಯನ ದೇಹದ ಆನೆಯ ಮುಖದವ ..ಯೋಚಿಸಿದಾಗ ಆಶ್ಚರ್ಯ ಆಗುತ್ತೆ...ಮನುಷ್ಯನಿಗೆ ಅಷ್ಟು ದೊಡ್ಡ ಪ್ರಾಣಿಯ ತಲೆ ಸರಿ ಹೋಗುತ್ತಾ ಅಂತ...ಆದರೆ ಇದರ ಆಧ್ಯಾತ್ಮಿಕ ಅರ್ಥ...ಎಲ್ಲ ಜೀವಿಗಳಲ್ಲಿ  ಮನುಷ್ಯ ಶರೀರ  ಉತ್ತಮವಾದದ್ದು...ಹಾಗೆ ಎಲ್ಲ ಜಿವಿಗಳಲ್ಲಿ ದೂಡ್ಡ ತಲೆ ಅಂದರೆ ಆನೆಯದ್ದು..ದೊಡ್ಡ ತಲೆ ಅಂದರೆ ಅನಂತ ಜ್ಞಾನದ ಸಂಕೇತ. ಅಂದರೆ ಉತ್ತಮ ಶರೀರದಲ್ಲಿ ಅನಂತ ಜ್ಞಾನ ಶಕ್ತಿ ಹೊಂದಿರುವವನು...ಇನ್ನು ಸೊಂಡಿಲು ..ಅಂದರೆ ಮೂಗು ..ಮೂಗು ನಮಗೆ ಬರೆ ಜ್ಞಾನೇಂದ್ರಿಯ ಆದರೆ ಆನೆಗೆ ಕರ್ಮೇಂದ್ರಿಯ ಮತ್ತು ಜ್ಞಾನೇಂದ್ರಿಯ....ಆನೆಯ ಕಣ್ಣು ಚಿಕ್ಕದ್ದು ಮತ್ತು ಕಿವಿ ದೊಡ್ಡದು . ನೋಡೋದಕ್ಕೂ ಕೇಳೋದಕ್ಕೂ ಸಮನ್ವಯ ಕಲ್ಪಿಸಿಕೊಂಡರೆ ಮಾತ್ರ ಜ್ಞಾನ ಉಂಟಾಗುತ್ತೆ. ಆನೆ ಕಿವಿಯಿಂದ ಆಗಾಗ ಕಣ್ಣಿಗೆ ಬೀಸಿಕೊಳ್ಳುತ್ತೆ ಅಂದರೆ ನೋಡೋದಕ್ಕೂ ಕೇಳೋದಕ್ಕೂ ಸಮನ್ವಯ ತಂದುಕೊಳ್ಳುತ್ತೆ. ಆಗ ಮಾತ್ರ ಯಾವದೇ ವಿಷಯ ಸತ್ಯವಾಗೋಕೆ ಸಾಧ್ಯ. ಹಾಗೆ ಕೃತ್ಯಕ್ಕೂ ವಾಸನೆಗೂ ಸಂಬಂಧ ಕಲ್ಪಿಸುತ್ತೆ ಸೊಂಡಿಲು. ಆನೆ ಸೊಂಡಿಲಿಂದ ಸ್ನಾನ ಮಾಡುತ್ತೆ ಅಂದರೆ ಜ್ಞಾನೇಂದ್ರಿಯದಿಂದ ಸ್ನಾನ ಮಾಡೋದು ಆನೆ ಮಾತ್ರ. ಗಣ ಅಂದರೆ ಗುಂಪು...ಗಣ ಅಂತಾಗಬೇಕಾದರೆ ಅದರಲ್ಲಿ ಶಿವ ಮತ್ತು ಶಕ್ತಿ ಎರಡೂ ಇರಬೇಕು. ಅಲ್ಲಿ ಒಂದು ನಿಯಮ ಇರುತ್ತೆ..ಆ ನಿಯಮವನ್ನ ಹೊಂದಿರುವಂತವನು ಅಂದರೆ ಗಣಪತಿ. ಇನ್ನು ಗಣೇಶನಿಗೆ ದೊಡ್ಡ ಹೊಟ್ಟೆ ಇದೆ..ದೊಡ್ಡ ಹೊಟ್ಟೆ ಸಂತೋಷದ ಪ್ರತೀಕ. ಜ್ಞಾನ ಇದ್ದವನ ಮುಖ ಯಾವಾಗಲೂ ಸಂತೋಷದಿಂದ ತುಂಬಿರುತ್ತೆ ..ಇದರ ಇನ್ನೊಂದು ಅರ್ಥ ಉದಾರತೆ...ಉದಾಹರಣೆ..ಸಾಂತ ಕ್ಲಾಸ್, ಲಾಫಿಂಗ್ ಬುದ್ಧ ಎಲ್ಲರಿಗೂ ದೊಡ್ಡ ಹೊಟ್ಟೆ ಅಂದರೆ ಉದಾರತೆಯನ್ನ ತೋರಿಸುತ್ತೆ. ಯಾವಾಗಲೂ ಜ್ಞಾನದ ಜೊತೆ ಸಂತೋಷ , ಉದಾರತೆ ಇರಲೇ ಬೇಕು ಇಲ್ಲದಿದ್ದರೆ ಜ್ಞಾನ ಬಂದಿಲ್ಲ ಅಂತಾನೆ ಅರ್ಥ. ಹೊಟ್ಟೆಯ ಸುತ್ತ ಒಂದು ಹಾವು ಸುತ್ತಿರೋದು..ಹಾವು ಪ್ರಜ್ಞೆಯ ಸಂಕೇತ. .ಅಂದರೆ ಸ್ವೀಕಾರ ಇರಬೇಕು,,ಸಂತೋಷ.ಇರಬೇಕು .ಎಲ್ಲದರ ಜೊತೆ ಪ್ರಜ್ಞೆ ಇರಬೇಕು ..ಇನ್ನೊಬ್ಬರ ಭಾವನೆಯ ಜೊತೆ ಸಂವೇದನಾ ಶೀಲತೆ ಇರಬೇಕು. ಇನ್ನು ಕೈಯ್ಯಲ್ಲಿ ಪಾಶ ಮತ್ತು ಅಂಕುಶ ...ಅಂಕುಶ ಎಚ್ಚರಿಸುವಂತದ್ದು..ಅಂದರೆ ಶಕ್ತಿಯನ್ನ ಜಾಗರೂಕತೆ ಮಾಡುವದು..ಶಕ್ತಿ ಜಾಗೃತಿಯಾದಾಗ ಅದನ್ನ ಹಿಡಿತದಲ್ಲಿಟ್ಟು ಕೊಳ್ಳಲು ಪಾಶ ಬೇಕು. ಇಲ್ಲದಿದ್ದರೆ ಜ್ಞಾನ ಎಲ್ಲೆಂದರಲ್ಲಿ ಓಡುತ್ತೆ ..ಕುದುರೆ ಸರಿಯಾಗಿ ಓಡಲು ಹೇಗೆ ಕಡಿವಾಣ ಬೇಕೋ ಹಾಗೆ..ಇಲ್ಲದಿದ್ದರೆ ಜ್ಞಾನ ವಿನಾಶಕ್ಕೆ ಎಡೆ ಮಾಡಿಕೊಡುತ್ತೆ...ಇನ್ನೊಂದು ಕೈಯ್ಯಲ್ಲಿ ಮೋದಕ ..ಮೋದ ಅಂದರೆ ಸಂತೋಷ..ಕ ಅಂದರೆ ಇಂದ್ರಿಯ..ಯಾವದು ನಮ್ಮ ಎಲ್ಲ ಇಂದ್ರಿಯಗಳಿಗೆ ಸಂತೋಷವನ್ನು ಕೊಡುತ್ತದೋ ಅದು ಮೋದಕ...ಅಂದರೆ ಜ್ಞಾನ ನಮ್ಮ ಮನಸ್ಸಿಗೆ ಮಾತ್ರ ಅಲ್ಲ ಎಲ್ಲ ಇಂದ್ರಿಯಗಳಿಗೂ ಸಂತೋಷ ತಂದುಕೊಡುತ್ತದೆ...ಇನ್ನು ಇಲಿ ಮೇಲೆ ಕುಳಿತಿದ್ದು...ಜ್ಞಾನ ಬರಬೇಕಿದ್ದರೆ ದೂಡ್ಡ ಕೆಲಸದಿಂದ ಬರಬೇಕೆಂದೇನು ಇಲ್ಲ..ಒಂದು ಚಿಕ್ಕ ವಿಷಯವು ಸಾಕು...ಮೂಶಕದ ಸ್ವಭಾವ ಕತ್ತರಿಸುವಂತದ್ದು,..ಅಂದರೆ ಮೂಷಿಕ ತರ್ಕದ ಪ್ರತೀಕ ...ಜ್ಞಾನ ಕೇವಲ ಒಂದು ಚಿಕ್ಕ ಮಂತ್ರದಿಂದಲೂ ಬರಬಹುದು...ಉದಾ-ಕನಕ ದಾಸ.ಕವಿರತ್ನ ಕಾಳಿದಾಸ....ಒಂದು ಚಿಕ್ಕ ಮಂತ್ರ ಕೂಡ ಅಜ್ಞಾನದ ಪರದೆ ಕಡಿಯುತ್ತದೆ....ವಿಧ್ಯಾದಿ ದೇವತೆಯ ಆವಿರ್ಭಾವ ಉಂಟಾಗುತ್ತೆ...ಅದಕ್ಕಾಗಿ ಒಂದು ಚಿಕ್ಕ ಇಲಿಯಮೇಲೆ ಗಣೇಶ ಕುಳಿತಿದ್ದು...
ಇನ್ನೊಂದು ಮೂಷಿಕ ಅಂದರೆ ಬರೆ ಇಂದ್ರಿಯ ಜಾಡಿನಲ್ಲೇ ಸುತ್ತೋ ಮನಸ್ಸನ್ನ ಮೂಲಕ್ಕೆ ಒಯ್ಯೋದು ..ಇಲಿ ಏನೇ ದೊರೆತರೂ ಅದನ್ನ ತನ್ನ ಬಿಲ ಅಂದರೆ ಮೂಲಕ್ಕೆ ಒಯ್ಯೋದು...ಹಾಗೆ ಮನಸ್ಸನ್ನ ಅಂತರ್ಮುಖ ವಾದಾಗ ಮೂಲಕ್ಕೆ ಸೇರುತ್ತೆ ಆಗ ಜ್ಞಾನ ಉಂಟಾಗೋದು...ಯಾವಾಗ ಜ್ಞಾನ ಉಂಟಾಗುತ್ತೋ ಆಗ ವಿಘ್ನಗಳೆಲ್ಲಾ ವಿಘ್ನ ವಾಗಿ ಉಳಿಯೋಲ್ಲ ...ಇವೆಲ್ಲ ಜೀವನದ ಘಟನೆಗಳು ..ಅನ್ನೋ ಸಮಗ್ರ ದೃಷ್ಟಿ ಕೋನ ಉಂಟಾಗುತ್ತೆ....ಇವು ಗಣೇಶನ ಸ್ವರೂಪದ ವಿಷಯ.....ಇನ್ನು ಚೌತಿ ದಿನ ಚಂದಿರನನ್ನ ನೋಡಬಾರದು ಅನ್ನೋ ವಿಷಯ..ಚಂದಿರ ಅಂದರೆ ಮನಸ್ಸಿನ ಪ್ರತೀಕ...ಎಷ್ಟೋ ಸಲ ಬುದ್ಧಿ ಹೇಳಿದ್ದನ್ನ ಮನಸ್ಸು ಕೇಳೋಲ್ಲ..ಹಾಗೆ ಮನಸ್ಸಿನ ಪ್ರತೀಕ ಚಂದ್ರ ಬುದ್ಧಿ ದೇವತೆಯಾದ ಗಣಪತಿಯನ್ನ  ನೋಡಿ ನಕ್ಕ.. ಆಗ ಗಣೇಶ ಒಂದು ಹಲ್ಲನ್ನ ಮುರಿದು ಚಂದ್ರನಿಗೆ ಎಸೆದ....ಯಾವಾಗಲೂ ಆನೆ ಅಗೆಯೋ ಹಲ್ಲು ಕಾಣೊಲ್ಲ..ಕಾಣೋ ಹಲ್ಲು ಅಗೆಯೋಲ್ಲ..ಅಂದರೆ ನಾವು ಯೇನಾಗಿರ್ತಿವೋ ಅದನ್ನ ವ್ಯಕ್ತ ಮಾಡಲು ಸಾಧ್ಯವಿಲ್ಲ...ವ್ಯಕ್ತ ಆಗೋದಷ್ಟೆ  ನಾವಲ್ಲ...ಒಳಗೆ ಬೇರೇನೆ ಆಗಿರ್ತಿವಿ....ಗಣೇಶ ಚಂದ್ರನಿಗೆ ನಿನ್ನ ಯಾರೂ ನೋಡದ ಹಾಗೆ ಆಗಲಿ ಎಂದು ಶಾಪ ಕೊಟ್ಟ..ಆದರೆ ಮನಸ್ಸೇ ಇಲ್ಲದಿದ್ದರೆ ಜಗ ನಡೆಯುವದಾದರೂ ಹೇಗೆ...ಅದಕ್ಕೆ ದೇವತೆಗಳೆಲ್ಲ ಬೇಡಿಕೊಂಡಾಗ ಗಣಪತಿ ಕರುಣಾಪೂರಿತ ನಾಗುತ್ತಾನೆ...ಇಲ್ಲಿ ದೈವಿ ಗುಣ ಅಂದರೆ ಕರುಣೆ..ಆಗ ಪರಿಹಾರ ಸೂಚಿಸುತ್ತಾನೆ...ಚೌತಿ ದಿನ  ಮಾತ್ರ ಚಂದ್ರನ ನೋಡಬಾರದು ಅಂತ... ಬುದ್ಧೀಗೆ ವಿರುದ್ಧವಾದ ಮನಸ್ಸನ್ನ ಯಾವತ್ತೂ ಕೇಳ ಬಾರದು ಅನ್ನೋ ಸಂದೇಶವನ್ನ ತಿಳಿಸಲಿಕ್ಕಾಗಿ...ಇದೊಂದು ನಿರೋಪಣೆ..




ಅಂತರ್ಜಾಲದ ಹುಡುಗ

http://www.panjumagazine.com/?p=664
ಭಾವನ ಊಟಮುಗಿಸಿ ವಿಶ್ರಾಂತಿಗಾಗಿ ಸ್ವಲ್ಪ ಹೊತ್ತು ಮಲಗೋಣ ಎಂದು ಸೋಫಾದಲ್ಲಿ ಇನ್ನೇನು ಮಲಗಬೇಕು ಅಷ್ಟರಲ್ಲಿ ಅವಳ ಮೊಬೈಲ್ ಗೆ ಟಿನ್ ಟಿನ್ ಎಂದು ಸಂದೇಶ ಬಂತು, ಎದ್ದು ನೋಡಿದಾಗ  ಹಾಯ್ ಅಕ್ಕಾ ಹೇಗಿದ್ದೀಯ,ಈ ಬದನಸೀಬ್ ತಮ್ಮನ ಮರೆತುಬಿಟ್ಟೆಯ ಎನ್ನುವ ಸಂದೇಶ ನೋಡಿ ಅವಳಲ್ಲಿ ಬೇಸರ, ಸಂತೋಷ, ಆತಂಕದ ಭಾವನೆಗಳು ಒಮ್ಮೆಲೆ ನುಗ್ಗಿ ಕರುಳಲ್ಲಿ ಚುಚ್ಚಿದ ಅನುಭವ. ನಿಧಾನವಾಗಿ ಕಣ್ಣಲ್ಲಿ ನೀರಿನ ಹನಿಗಳು ತೊಟ್ಟಿಕ್ಕಿದವು. ಒಮ್ಮೆ ನಿಟ್ಟುಸಿರಿಟ್ಟಳು. ಮನಸ್ಸು ನಿದ್ದೆ ಮರೆತು ನೆನಪಿನ ಕುದುರೆಯ ಬೆನ್ನೇರಿತ್ತು.
ಆಗಿನ್ನು ಹೊಸತಾಗಿ ಅಂತರ್ಜಾಲದಲ್ಲಿ ಮುಖಪುಸ್ತಕ (FB) ಖಾತೆ ತೆಗೆದ ಸಮಯ. ಗಂಡ ಆಫೀಸ್, ಮಕ್ಕಳು ಸ್ಕೂಲ್ ಅಂತ ಹೋದಾಗ ಹೆಚ್ಚಿನ ಸಮಯವೆಲ್ಲ ಕಂಪ್ಯೂಟರ್ ಮುಂದೆ ಕಳೆಯುತ್ತಿದ್ದಳು ಭಾವನ. ಅಂತಹ ಸಮಯದಲ್ಲಿ ಪರಿಚಯವಾದವನೇ ಕುಮಾರ. ಅವಳಿಗಿಂತ ವಯಸ್ಸಿನಲ್ಲಿ ೬-೮ ವರ್ಷ ಚಿಕ್ಕವನು. ಮುಖದಲ್ಲಿ ಮುಗ್ಧತೆ ತುಂಬಿದ ಗುಂಗುರು ಕೂದಲಿನ ಸುಂದರ ಹುಡುಗ. ಮೇಡಂ ಎಂದು ಸಂಭೋದಿಸುತ್ತ ಬೆಂಬಿಡದೇ ಪರಿಚಯವಾದ ಈತ ದಿನಕಳೆದಂತೆ ಹತ್ತಿರವಾಗಿ  ಅಕ್ಕಾ ಎಂದು ಕರೆಯಲು ಪ್ರಾರಂಭಿಸಿದ. ಭಾವನಾಳೋ ಹೆಸರಿಗೆ ತಕ್ಕಂತೆ ಭಾವನಾ ಜೀವಿ. ಮೃದು ಸ್ವಭಾವದ ಶುದ್ಧ ಮನಸ್ಸಿನ ಸುಂದರ ಮಹಿಳೆ. ಅಕ್ಕಾ ಎಂದು ಕರೆದಾಗ ತನಗಿಲ್ಲದ ತಮ್ಮನನ್ನು ದೇವರೇ ಪರಿಚಯಿಸಿದ ಎಂದು ಸಂಭ್ರಮ ಪಟ್ಟಳು. ಹೆಂಗಸರಿಗೇ ಕರುಣೆ ಜಾಸ್ತಿ ಅದರಲ್ಲೂ ಅಕ್ಕಾ, ಅಮ್ಮಾ ಅಂತೆಲ್ಲ ಕರೆದಾಗ ಕರಗಿ ನೀರಾಗೋದು ಹೆಂಗಸರ ದುರ್ಬಲತೆ. ಕುಮಾರ ಕೂಡ ಇವಳಿಗೆ ಇಷ್ಟವಾಗುವ ರೀತಿಯಲ್ಲೇ ಮಾತನಾಡುತ್ತ ಅಕ್ಕನ ಮನಸ್ಸಲ್ಲಿ ತನ್ನ ಸ್ಥಳ ಭದ್ರವಾಗಿಸುವಲ್ಲಿ ಸಫಲನಾಗುತ್ತಾನೆ.
ನೀವು ಇದ್ದ ಜಾಗದಲ್ಲಿ ನೀನು, ಬನ್ನಿ, ಹೋಗಿ ಜಾಗದಲ್ಲಿ ಬಾರೋ, ಹೋಗೋ ಬಂದಾಯ್ತು. ಒಂದು ದಿನ ಸಾಯಂಕಾಲ ತನಗೆ ಮೈ ಹುಷಾರಿಲ್ಲ ಎಂದು ಸಂದೇಶ ಜೊತೆಗೆ ಅವನ ಫೋನ್ ನಂಬರ್  ಕಳುಹಿಸಿದ. ಭಾವನಾಳಿಗೋ ತಮ್ಮನಿಗೆನೋ ಆಯಿತು ಎನ್ನೋ ಚಡಪಡಿಕೆ. ನೋಡಿ ಬರಲು ಅವನಿರುವದು ದೂರದ ಶಹರದಲ್ಲಿ. ಬೆಳಗಾಗುವದನ್ನೇ ಕಾದ ಭಾವನ ಬೇರೇನೂ ಯೋಚಿಸದೆ ಫೋನ್ ಮಾಡುತ್ತಾಳೆ. ಅಲ್ಲಿಗೆ ಅವಳು ತನಗರಿವೆ ಇಲ್ಲದೆ ತನ್ನ ಮೊಬೈಲ್ ಸಂಖ್ಯೆಯನ್ನ ತಮ್ಮನಿಗೆ ರವಾನಿಸಿದಂತಾಯ್ತು. ಹೀಗೆ ಅಕ್ಕ ತಮ್ಮನ ಸಂಬಂಧ ಗಟ್ಟಿಯಾಗುತ್ತಾ, ಮಾತನಾಡುವ ಸಮಯ ಕೂಡ  ಬೆಳೆಯುತ್ತಾ ಹೋಯಿತು. ಒಂದು ದಿನ ಮಾತನಾಡದಿದ್ದರೆ ಕರುವನ್ನ ಕಳೆದುಕೊಂಡ ಹಸುವಿನಂತೆ  ಚಡಪಡಿಸ ತೊಡಗಿದಳು. ಇವಳಿಗೆ ತಮ್ಮನ ಮೇಲೆ ಇಷ್ಟು ಪ್ರೀತಿ ಹುಟ್ಟಿಕೊಳ್ಳಲು ಕಾರಣ ಕುಮಾರನ ಜೀವನ ಕಥೆ.
ಕುಮಾರ ಹುಟ್ಟಿದ್ದು ಕರಾವಳಿಯ ಒಂದು ಪುಟ್ಟ ಹಳ್ಳಿಯಲ್ಲಿ.. ಊರ ಮುಖಂಡರ ಮನೆತನದಲ್ಲಿ  ಮೂರು ಹೆಣ್ಣು ಮಕ್ಕಳ  ನಂತರ ಹುಟ್ಟಿದ ಒಬ್ಬನೇ ಮುದ್ದಿನ  ಮಗ. ಮನೆಯವರ ಅತಿ ಪ್ರೀತಿಯಿಂದ ಪುಂಡನಾಗಿ ಬೆಳೆದ.. ಎಂಟನೆ ತರಗತಿಯಲ್ಲಿ ಅನುತ್ತೀರ್ಣನಾದಾಗ ಮನೆಯವರ ಬೈಗುಳ, ಅವಮಾನಕ್ಕೆ ಹೆದರಿ ಯಾರಿಗೂ ಹೇಳದೆ ಊರು ಬಿಟ್ಟು ದೂರದ ಶಹರ ಸೇರಿದ. ಆ ದೊಡ್ಡ ನಗರದಲ್ಲಿ ಬದುಕಿನ ದಾರಿ ಹುಡುಕಿ ಹೊರಟ ಈ ಪೋರನಿಗೆ  ಆಸರೆಯಾಗಿದ್ದು ರಸ್ತೆ ಬದಿಯ ಪಾನಿ ಪುರಿ ಗಾಡಿಯ ಮಾಲಿಕನ ಮನೆ. ಅವನ ಜೊತೆ ಕೆಲಸಮಾಡುತ್ತ ಅವ ಕೊಟ್ಟ ಅರೆ ಹೊಟ್ಟೆ ಊಟ ತಿನ್ನುತ್ತ ದಿನ ಕಳೆಯುತ್ತಿದ್ದ. ಕಷ್ಟದಲ್ಲೂ ಇವನ ಯೋಗ ಎನ್ನುವಂತೆ ಅಲ್ಲೇ ಹತ್ತಿರದ ಹೋಟೆಲಿನ ಮಾಲೀಕ ಒಂದು ದಿನ ಕುಮಾರನನ್ನು ಕರೆದು ಹೋಟೆಲಿನಲ್ಲಿ ಕೆಲಸ ಮಾಡುವಂತೆ ಕೇಳುತ್ತಾನೆ.
ಆಗ ಕುಮಾರ ಅಲ್ಲಿ ಕೆಲಸ ಮಾಡುತ್ತಾ ಅತಿ ಕಷ್ಟದಲ್ಲೂ ತನ್ನ ಓದು ಮುಂದುವರೆಸುವ ಆಸೆಗೆ ಜೀವ ನೀಡಿ ರಾತ್ರಿ ಶಾಲೆಗೆ ಸೇರಿ ಶ್ರದ್ಧೆಯಿಂದ ಓದಿ ಅಂತು ಡಿಗ್ರೀ ಮುಗಿಸಿ ಒಂದು ಸಂಸ್ಥೆ ಯಲ್ಲಿ ಕೆಲಸಕ್ಕೆ ಸೇರಿದ ವಿಷಯವನ್ನ ಕಲ್ಲು ಹೃದಯವೂ ಕರಗುವಂತೆ ಭಾವನಾಳಿಗೆ ಬಣ್ಣಿಸಿದ. ಮೊದಲೇ ಮೃದು ಹೃದಯದ ಭಾವನಾ ಪೂರ್ತಿ ಕರಗಿ ಕುಮಾರನ ಜಾತಿ. ಅಂತಸ್ತು ಎಲ್ಲ ಮರೆತು ತನ್ನ ಕುಟುಂಬದ ಸದಸ್ಯನಂತೆ  ಅವನನ್ನ ಆದರಿಸುತ್ತಾ ತನ್ನ ಕಷ್ಟ ಸುಖಗಳನ್ನೆಲ್ಲ ಹಂಚಿಕೊಳ್ಳಲು ಪ್ರಾರಂಭಿಸುತ್ತಾಳೆ. ಅವನೂ ಸಹ ಅಕ್ಕ ಅಕ್ಕ ಎಂದು ಅವಳ ಕಷ್ಟಕ್ಕೆ ಸಮಾಧಾನದ ಮಾತಾಡಿ ಅವಳಲ್ಲಿ ನಗು ಮೂಡಿಸುತ್ತಿದ್ದ.ಇದು ಇವರಿಬ್ಬರ ಸಂಭಂದಕ್ಕೆ ಭದ್ರ ಬೆಸುಗೆಯಾಯ್ತು. ಜಾತಿ ಯಾವದಾದರೇನು ಪ್ರೀತಿಗೆ. ಅದು ಯಾವದೇ ತರಹದ್ದಾಗಿರಲಿ ಅಣ್ಣ – ತಂಗಿ, ಅಕ್ಕ-ತಮ್ಮ ,ತಾಯಿ-ಮಗ, ಪ್ರೇಮಿಗಳ ಪ್ರೀತಿ ಹೀಗೆ ರೂಪ ಬೇರೆ ಯಾದರೂ ಪ್ರೀತಿ ಅನ್ನೊದು ಹಣ, ಜಾತಿ, ಅಂತಸ್ತುಗಳ ಬೇಧವಿಲ್ಲದೆ  ಅದು ಅವ್ಯಾಹತವಾಗಿ ಎಲ್ಲ ಅಡೆ ತಡೆ ಗಳನ್ನೂ ದಾಟಿ ಸಾಗುತ್ತದೆ ಅಲ್ಲವೇ?
ಹೀಗಿರುವಾಗ ಅಬ್ಬಾ ಅದೊಂದು ದಿನ ತಮ್ಮನ ಮುಖ ಪುಸ್ತಕದಲ್ಲಿ ಅವನ ಛಾಯ ಚಿತ್ರ ಬದಲಾಯ್ತು. ಅದೇ ಭಾವನಾಳ ಭಾವನೆಯ ಕೋಟೆಗೆ ಬಿದ್ದ ಮೊದಲ ಪೆಟ್ಟು. ಒಮ್ಮೆಲೆ ಹಾವನ್ನು ತುಳಿದಂತೆ ಬೆಚ್ಚಿದಳು.ಯಾಕಂದರೆ ಅವಳ ಮುದ್ದಿನ ತಮ್ಮ ಮುಗ್ಧತೆ ಕಳೆದುಕೊಂಡು ರೌಡಿಯಂತೆ ನಿಂತಿದ್ದ.ಆದರೂ ಸಾವರಿಸಿಕೊಂಡ ಭಾವನಾ ಮುಂದೆ ನೋಡಿದಾಗ ಜೊತೆಯಲ್ಲಿ ಒಂದು ಅಸಹ್ಯ ಕರವಾದ ಕೊಂಡಿಯನ್ನು ಇವಳ ಹೆಸರಿಗೆ ಟ್ಯಾಗ್ ಮಾಡಿದ್ದ. ಭಾವನಾಳಿಗೆ ಒಮ್ಮೆಲೆ ಪಾತಾಳಕ್ಕೆ ಕುಸಿದ ಅನುಭವವಾಯ್ತು. ಮುಖ ಬಿಳಿಚಿಕೊಂಡು ಮೈಯೆಲ್ಲಾ ಕಂಪಿಸಿತು, ಕಣ್ಣಲ್ಲಿ ಆಕ್ರೋಶ, ಜೊತೆಗೆ ತಾನು ತಮ್ಮ ಎಂದು ಪ್ರೀತಿಸಿದ ಕುಮಾರನಿಂದಲೇ ಮೋಸಹೋದೆ ಎಂಬ ಅವಮಾನ, ವ್ಯಥೆ ಎಲ್ಲವೂ ಒತ್ತರಿಸಿ ಬರತೊಡಗಿದವು. ಒಮ್ಮೆಲೇ ತಮ್ಮನಿಗೆ ಮೋಸಗಾರ ಎಂದು ಉಗಿದು ತಮ್ಮನನ್ನು ಸ್ನೇಹಿತರ ಪಟ್ಟಿಯಿಂದ ಕಿತ್ತೆಸೆದಳು. ಪಟ್ಟಿಯಿಂದ ಏನೋ ಕಿತ್ತೆಸೆದಳು ಸರಿ ಆದರೆ ಅಷ್ಟೆ ಸುಲಭದಲ್ಲಿ ಮನಸ್ಸಿಂದ ಹೊರಹಾಕಲು ಸಾಧ್ಯವೇ? ದಿನಾಲು ತಮ್ಮನ ನೆನೆದು ಕಣ್ಣೀರು ಹಾಕುವದೆ ಕೆಲಸವಾಯ್ತು. ಎಲ್ಲ ಕೆಲಸದಲ್ಲೂ ಆಸಕ್ತಿ ಕಳೆದುಕೊಂಡು ಮಂಕಾದಳು.
ಒಂದೆರಡು ದಿನ ಹೀಗೆ ಕಳೆಯೋ ಹೊತ್ತಿಗೆ ಭಾವನಾಳ ಫೋನ್ ಗೆ ಸಂದೇಶಗಳು ಬರ ತೊಡಗಿದವು. ಅಕ್ಕಾ ಕ್ಷಮಿಸು, ತಪ್ಪಾಯ್ತು ಒಳ್ಳೇ ಅಕ್ಕನ ಮನಸ್ಸಿಗೆ ನೋವುಕೊಟ್ಟೆ, ಇನ್ನೊಮ್ಮೆ ಹೀಗೆ ಮಾಡಲ್ಲ, ಹೀಗೆ ತರ ತರದ ಬೇಡಿಕೆಗಳು. ಇವಳಿಗೋ ಇದನ್ನೆಲ್ಲಾ ಓದಿ, ಒಮ್ಮೆ ಯಾಕೆ ಕ್ಷಮಿಸಿ  ಕುಮಾರನಿಗೆ ತಪ್ಪನ್ನ ತಿದ್ದಿಕೊಳ್ಳಲು ಒಂದು ಅವಕಾಶ ಕೊಡಬಾರದು ಅನಿಸಿದರೆ ಇನ್ನೊಮ್ಮೆ ಬಾಯ್ತುಂಬ ಅಕ್ಕ ಅಂತ ಕರೆದು ಅಕ್ಕನ ಭಾವನೆಗೆ ಬೆಂಕಿ ಇಟ್ಟ ನೀಚ, ಇವನನ್ನು ನಂಬುವದಾದರು ಹೇಗೆ ಎನ್ನೊ ಅಕ್ರೋಶ ದಲ್ಲಿ ತಲ್ಲಣಿಸುತ್ತಿರುತ್ತಾಳೆ.  ಗಂಡ ಮಕ್ಕಳ ಯಾವ ಸಮಾಧಾನವೂ ಅವಳ ನೋವನ್ನ ಕಡಿಮೆಮಾಡುವಲ್ಲಿ ಯಶಸ್ವಿಯಾಗುತ್ತಿಲ್ಲ. ಅವನು ಯಾವ ತರದ ವ್ಯಕ್ತಿಯೇ ಆಗಿರಲಿ ಅವನು ೩-೪ ತಿಂಗಳಿಂದ ಭಾವನಾಳ ಮನಸ್ಸಲ್ಲಿ ತಮ್ಮನಾಗಿ ಭಾವನೆಯ ಮಹಾಪೂರವನ್ನೇ ಹರಿಸಿದ್ದಾನೆ, ಪ್ರೀತಿ ವಿಶ್ವಾಸ ತೋರಿ ಅವಳ ಮನಸ್ಸಲ್ಲಿ ಆಳವಾಗಿ ಬೇರೂರಿದ್ದಾನೆ, ಮಾತಿನ ಮೋಡಿಯಿಂದ ಅವಳ ಹೃದಯದಲ್ಲಿ ತನ್ನದೇ ಚಾಪು ಒತ್ತಿದ್ದಾನೆ. ಹೀಗಿರುವಾಗ ಅವನನ್ನು ದೂರಮಾಡುವ ಯೋಚನೆ ಬಂದಾಗ ಭಾವನಾಳಿಗೆ ಹೊಟ್ಟೆಯಲ್ಲಿ ಕತ್ತರಿ ಆಡಿಸಿದ ಅನುಭವವಾಗುತ್ತಿತ್ತು. ಕೆಟ್ಟ ನಡತೆಯ ಕುಮಾರನನ್ನು ತಮ್ಮ ಅಂತ ಒಪ್ಪಿಕೊಳ್ಳಲೂ ಮನಸ್ಸಿಗೆ ಹಿಂಸೆಯಾಗ ತೊಡಗಿತು. ಹೀಗೆ ಇಬ್ಬಗೆಯ ಹೊಯ್ದಾಟದಲ್ಲಿ ದಿನಾ ಕಣ್ಣಿರು ಸುರಿಸುತ್ತಾ ಈ ಸಮಸ್ಯೆಯ ಮುಕ್ತಿಗಾಗಿ ಮಾರ್ಗ ಹುಡುಕುತ್ತಿದ್ದಾಳೆ ಭಾವನ.
ಓದುಗರೇ ಈಗ ನೀವೇ ಹೇಳಿ ಭಾವನ ಯಾವ ನಿರ್ಧಾರಕ್ಕೆ ಬಂದರೆ ಒಳಿತು. ತಮ್ಮನ ಸಂದೇಶಕ್ಕೆ ಪ್ರತಿಕ್ರಿಯಿಸದೆ ಮನಸ್ಸನ್ನ ಕಲ್ಲು ಮಾಡಿಕೊಂಡು ತನ್ನ ಮನಸ್ಸಲ್ಲಿ ನಿಂತ ತಮ್ಮನನ್ನ ನಿರ್ಧಯೆಯಿಂದ ದೂರ ತಳ್ಳು ವುದೋ ? ಅಥವಾ  ಅವನಿಗೆ ತಪ್ಪನ್ನ ತಿದ್ದಿಕೊಳ್ಳಲು ಒಂದು ಅವಕಾಶ ಕೊಟ್ಟು ಅವನ ಸ್ವಭಾವವನ್ನ ಪರಿವರ್ತಿಸಲು ಪ್ರಯತ್ನಿಸುವದೋ?
-ಮಮತಾ ಕೀಲಾರ್

Sunday 5 October 2014

ನೀನೊಂದು ಕವಿತೆಯಂತೆ ನನಗೆ 
ಹಾಡಿದರೂ ಮುಗಿಯುವೆ 
ಬರೆದರೂ ಮುಗಿಯುವೆ 
ಅದಕ್ಕಾಗಿ ಹೃದಯ ಕವಾಟಿನಲ್ಲಿ ಮುಚ್ಚಿಟ್ಟಿದ್ದೇನೆ .........ಕೀಮ

Wednesday 1 October 2014

Fear is worst than reality ...ಅನ್ನೋ ಮಾತು ಎಷ್ಟು ಸತ್ಯ ಅನಿಸ್ತು ನಿನ್ನೆಯ ಒಂದು ಘಟನೆಯಿಂದ....ನನ್ನ ಯಜಮಾನರು ಕಾಲೇಜ್ ಸ್ಟುಡೆಂಟ್ ಕರ್ಕೊಂಡು ಕಾಲೇಜ್ ಬಸ್ ಅಲ್ಲಿ ತುಮಕೂರಿಗೆ ಹೋಗಿದ್ರು ಏನೋ ಕೆಲಸಕ್ಕಾಗಿ...ಮೊನ್ನೆನೆ ಹೇಳಿದ್ರು ಬರುವಾಗ ನೀನು ಕಾರ್ ತಕೊಂಡು ಬಾ ನಾನು ಇಳಿಯೋ ಜಾಗಕ್ಕೆ ಅಂತ..ಆಯ್ತು ಅಂತ ನಾನೂ ಹೇಳಿದ್ದೆ...ನಿನ್ನೆ ಅವರು ಎಲ್ಲ ಕೆಲಸ ಮುಗಿದು ತುಮಕೂರ್ ಬಿಟ್ಟಿದ್ದೆ ಲೇಟ್...ಇಲ್ಲಿ ಬರುವಾಗ ರಾತ್ರಿ 12.30.ಸಮಯ...ಶ್ರೀರಂಗ ಪಟ್ಟಣದ ಹತ್ತಿರ ಬರುವಾಗ ಫೋನ್ ಮಾಡಿದ್ರು..ಬಾ ಹೇಳಿದ ಜಾಗಕ್ಕೆ ಅಂತ....ಮಕ್ಕಳೆಲ್ಲ ಮಲಗಿದ್ರು ..ನಾನು ಮನೆ ಲಾಕ್ ಮಾಡಿ ಹೊರಟೆ...ನಿನ್ನೆ ಬೇರೆ ರಾತ್ರಿ 9 ಘಂಟೆ ಅಷ್ಟೊತ್ತಿಗೆ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ...ಮಳೆ ಬಂದು ನಿಂತಿದ್ದಕ್ಕೋ ಏನೋ ವಾತಾವರಣ ಒಂಥರಾ ಭೀತಿ ಹುಟ್ಟಿಸೋ ಹಾಗೆ..ಜೊತೆಗೆ ಆ ರಾತ್ರಿಯಲ್ಲಿ ಜನರ ಸುಳಿವೇ ಇಲ್ಲ...ಆದರೂ ಯಜಮಾನರ ಕರೆದುಕೊಂಡು ಬರಲು ಹೊರಟೆ..ಅವರ ಬಸ್ ಬರೋಕಿಂತ ಮುಂಚೆ ನಾನು ಅವರು ಹೇಳಿದ ಜಾಗಕ್ಕೆ ಹೋಗಿದ್ದೆ...ಅಲ್ಲೇ ಕಾರ್ ನಿಲ್ಲಿಸಿ...ಕಾಯುತ್ತ ಇದ್ದೆ...ನಿರ್ಜನ ರೋಡ್..ಆಗ ಈಗ ತೊಟ್ಟಿಕ್ಕೋ ನೀರ ಹನಿ ಶಬ್ದ ಜೊತೆಗೆ ಎಲ್ಲೋ ದೂರದಲ್ಲಿ ಕುಡುಕರೋ..ಹುಚ್ಚರೋ ..ಕೂಗೋ ಶಬ್ದ...ನಾನೂ ಒಬ್ಬಳೇ ಕಾಯ್ತಾ ಇದ್ದೆ..ಇದ್ದಕ್ಕಿದ್ದಂತೆ ಒಂದು ಬೈಕ್ ಬಂತು..ನಾನು ಕಾರ್ ಗ್ಲಾಸ್ ಮೇಲೆ ಮಾಡಿ ಕುಳಿತೆ..ಆ ಬೈಕ್ ಸವಾರ ಬಂದು ಕಾರ್ ಗ್ಲಾಸ್ ತಟ್ಟಿದ...ನನಗೆ ಒಂತರ ಹೆದರಿಕೆ ಶುರುವಾಯ್ತು....ಒಂದೇ ಕ್ಷಣದಲ್ಲಿ ದಂಡು ಪಾಳ್ಯದ ಕಳ್ಳರಿಂದ ನಿರ್ಭಯಳ ಕೇಸ್ ವರೆಗಿನ ರೀಲ್ ಮನಸ್ಸಲೇ ಬಿಚ್ಕೊಂಡ್ತು ...ಉಮೇಶ್ ರೆಡ್ಡಿ ಯಿಂದ..ಮೊನ್ನೆ ಮೊನ್ನೆ ವರೆಗೆ ಭೀತಿ ಹುಟ್ಟಿಸಿದ ಜೈ ಶಂಕರ ನೆನಪಾದ...ಏನು ಮಾಡಲಿ ಅಂತ ತಿಳಿಯದಾದೆ...ಆದರೂ ಎಲ್ಲೋ ಒಂದು ಕಡೆ ನನಗೆ ಆತ್ಮವಿಶ್ವಾಸ ..ನಾನು ಯಾರಿಗೂ ಮೋಸ ಮಾಡಿಲ್ಲ ಹಾಗಾಗಿ ಆ ದೇವರು ನನಗೆ ಮೋಸ ಮಾಡಲ್ಲ ಅಂತ...ಅಂತು ಕತ್ತಲ್ಲಿದ್ದ ಗಣೇಶನ ಲಾಕೆಟ್ ಕಣ್ಣಿಗೆ ಒತ್ತುಕೊಂಡು ವಿಂಡೋ ಗ್ಲಾಸ್ ಇಳಿಸಿದೆ..ಕೋಪದಲ್ಲಿ ಏನು ಅಂತ ಕೇಳಿದೆ...ಆಗ ಅವನು ಏನಿಲ್ಲ ಮೇಡಂ ಒಬ್ರೇ ಈ ರಾತ್ರಿಯಲ್ಲಿ ಕಾರ್ ನಿಲ್ಸಿದ್ದೀರಿ...ಕಾರ್ ಗೆ ಏನೋ ಪ್ರಾಬ್ಲಮ್ ಆಯ್ತಾ ..ಏನಾದ್ರು ಹೆಲ್ಪ್ ಬೇಕಾ ಅಂತ ಕೇಳೋಕೆ ಬೈಕ್ ತಿರುಗಿಸಿ ಬಂದೆ ...ಅಂದ ..ನನಗೆ ಏನು ಹೇಳೋಕು ತೋಚಲಿಲ್ಲ..ನಾನು ನಗುತ್ತ ಇಲ್ಲ..ಯಜಮಾನರಿಗೆ ಕಾಯ್ತಿದೀನಿ ..ಧನ್ಯವಾದ ..ಎಂದೆ ಓಕೆ ಮೇಡಂ ಅಂದು ಹೊರಟು ಹೋದ....ನನಗೆ ನನ್ನ ಮೇಲೆ ನಾಚಿಕೆ ಎನಿಸಿತು...ಏನೇನೋ ವಿಷಯ ಓದಿರ್ತಿವಿ.ಕೇಳಿರ್ತಿವಿ ..ಅದಕ್ಕಾಗಿ ಮನಸ್ಸು ಎಲ್ಲರನ್ನೂ ಒಂದೇ ತರದಲ್ಲಿ ಯೋಚಿಸಿಬಿಡುತ್ತೆ..ಒಳ್ಳೆಯವರು ಕೂಡ ನಮ್ಮ ಮನಸ್ಸಲ್ಲಿ ಕೆಟ್ಟವರಾಗಿ ಬದಲಾಗಿ ಬಿಡ್ತಾರೆ ಇಂತ ಸಂಧರ್ಬದಲ್ಲಿ...ಅದ್ಕೆ ಹೇಳೊದು ಹೆದರಿಕೆ ..ಅಥವಾ..ಯೋಚನೆ ಅನ್ನೋದು ನೈಜತೆಗಿಂತ ಎಷ್ಟು ಕೆಟ್ಟದ್ದಾಗಿರುತ್ತೆ ಒಮ್ಮೊಮ್ಮೆ...ಹೆದರಿಕೆ ಕೂಡ ಹುಟ್ಟೋದು ಯೋಚನೆಯಿಂದನೆ ಅಲ್ವಾ ...ನಾವು ಒಮ್ಮೊಮ್ಮೆ ಈ ಜಗತ್ತಲ್ಲಿ ನಿಜವಾಗಿ ಯಾರೂ ಇರೋಲ್ಲ ನಮಗೆ ನಾವಷ್ಟೇ ಅಂತ ಅಂದುಕೊಂಡು ನಿಜವಾದ ಪ್ರೀತಿ..ಸ್ನೇಹವನ್ನೂ ಅನುಮಾನಿಸಿ ಬಿಡುತ್ತೇವೆ...ಆದರೆ ತಮಾಷೆ ಅಂದರೆ ಈ imegination ಅನ್ನೋದು reality ಗಿಂತ ಕೆಟ್ಟದ್ದಾಗಿರುತ್ತೆ.....ಅದಕ್ಕೆ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕಾಗುತ್ತದೆ...