Thursday 20 November 2014

ಇವತ್ತು ಬೆಳಿಗ್ಗೆ ಉಪ್ಪಿಟ್ಟಿಗೆ ರವೆ ಹುರಿತಾ ಇರುವಾಗ ಇದ್ದಕ್ಕಿದ್ದಲ್ಲೇ ಅಳು ತಡೆಯದೆ ಒಂದೈದು ನಿಮಿಷ ಬಿಕ್ಕಿದೆ...ನನಗೆ ಆಶ್ಚರ್ಯ ನನಗೇನಾಯ್ತು ಅಂತ ಏನೋ ತೀವ್ರವಾದ ನೋವು ಮನಸ್ಸಿಗೆ ..ತುಂಬಾ ಯೋಚಿಸಿದಾಗ ನನ್ನೆದಿರು ಬಂತು ನಿಂತಿದ್ದು ಅದೇ ಮಂಜುಳ ಅಲ್ಲಲ್ಲ ಸರ್ಕಲ್ ಮಂಜುಳನ ಪ್ರತಿಬಿಂಬ....ದಿನಾಲೂ ಟಿವಿ ,ಪೇಪರ್ ,ಮುಖಪುಸ್ತಕ ಹೀಗೆ ಎಲ್ಲೆಂದರಲ್ಲಿ ಬರೇ ಮುಗ್ದ ಮಕ್ಕಳು ಲೈಂಗಿಕತೆಗೆ ಬಲಿಯಾಗುತ್ತಿದ್ದ ಸುದ್ದಿ ನನಗರಿವಿಲ್ಲದೇ ನನ್ನ ಮನಸ್ಸಿನ ಆಳದಲ್ಲಿ ಕೂತು ಚಡಪಡಿಕೆ ತಂದಿದೆ....ನಾನೂ ಹೆಣ್ಣಾಗಿರುವದಕ್ಕೋ ಏನೋ ನನ್ನ ಒಡಲೂ ಮೂಖವಾಗಿ ರೋಧಿಸುತ್ತಿದೆ....ಲೈಂಗಿಕತೆ ಇಬ್ಬರ ಒಪ್ಪಿಗೆ ಯಿಂದ ನಡೆದರೆ ..ಅದು ಮಿಲನ ಮಹೋತ್ಸವ,ವೈಭವ...ಅದೇ ಬಲವಂತದಿಂದ ನಡೆದರೆ ಧಾರುಣ..ಯಾರಿಗೂ ಮುದ ನೀಡದ ರಾಕ್ಷಸೀಯ ಕ್ರಿಯೆ ..ಇದು ಯಾಕೆ ಜನರಲ್ಲಿ ಅರಿವಾಗುತ್ತಿಲ್ಲ....ಪಾಪ ಈ ಮಂಜುಳನಂತವರ ಗತಿ ಊಹಿಸಿದರೆ ಹೆಣ್ಣು ಜನ್ಮ ಒಂದು ಶಾಪವೆನಿಸುತ್ತಿದೆ...ಹೌದು ಮಂಜುಳ ಯಾರು ಹೇಳ್ತೀನಿ......ಆಗಿನ್ನು ನಾನೂ ಹೈಸ್ಚೂಲ್ ಓದ್ತಾ ಇದ್ದೆ..ಮನೆಯಲ್ಲಿ ಅಮ್ಮ ತುಂಬಾ ಸ್ಟ್ರಿಕ್ಟ್ ಆಗಿ ,ಸಂಪ್ರದಾಯಿಕವಾಗಿ ಬೆಳೆಸಿದ್ದ ಕಾರಣ ಅಕ್ಕ ಪಕ್ಕದ ಮನೆಗೆಲ್ಲ ಹೋಗಿ ಮಾತಾಡ್ತಾ ಕೂರೋ ಅಭ್ಯಾಸ ಇರಲಿಲ್ಲ....ಅದಕ್ಕಾಗಿ ಪ್ರತಿವರ್ಷ ಸ್ಕೂಲ್ ರಜೆ ಬಂದಾಗ ನಾನು ಬೆಂಗಳೂರಿಗೆ ಅಣ್ಣನ ಮನೆಗೆ ಹೋಗ್ತಿದ್ದೆ...ಆ ಹಳ್ಳಿಯಲ್ಲಿ ಸರಿಯಾದ ಬಸ್ ವ್ಯವಸ್ಥೆ ಇರದ ಕಾರಣ ನಾಲ್ಕು ಘಂಟೆಗೆ ಬರೋ ಬಸ್ಸಗೇ ಹೊನ್ನಾವರಕ್ಕೆ ಹೋಗಿ ರಾತ್ರಿ ಎಂಟೋ ಒಂಬತ್ತೋ ಘಂಟೆಗೆ ಹೋಗೋ ಬೆಂಗಳೂರು ಬಸ್ ಹಿಡಿಬೇಕಾಗಿತ್ತು...ಹಾಗಾಗಿ ಬಸ್ ಸ್ಟ್ಯಾಂಡ್ ಅಲ್ಲಿ ತುಂಬಾ ಹೊತ್ತು ಕಳೆಯೋ ಪ್ರಸಂಗ......ಅಂತ ಒಂದು ಟೈಮ್ ಅಲ್ಲಿ ಕಣ್ಣಿಗೆ ಬಿದ್ದವಳು ಈ ಮಂಜುಳ...ಸರ್ಕಲ್ ಮಂಜುಳಾ ಎಂದೇ ಎಲ್ಲರ ಬಾಯಲ್ಲಿ ಪ್ರಸಿದ್ಧವಾದವಳು...ಯಾಕೆಂದರೆ ಹಗಲಿಡಿ ಅವಳು ಹೈವೇ ಬಸ್ ಸ್ಟಾಪ್ ಅಲ್ಲೇ ಕಳೆಯುತ್ತಿದ್ದಳು...ಸಾಯಂಕಾಲ ಆದ ತಕ್ಷಣ ಹೊನ್ನಾವರದ ಮೇನ್ ಬಸ್ ಸ್ಟ್ಯಾಂಡ್ ಗೆ ಬರುತ್ತಿದ್ದಳು....ನಾ ನೋಡಿದಾಗ ಮಂಜುಳ ಪ್ರಾಯದ ಹುಡುಗಿ...ಸುಮಾರು ಇಪ್ಪತ್ತೈದು ವರ್ಷ ಇರಬಹುದು.. ಇವಳು ಮಾನಸಿಕ ಅಸ್ವಸ್ಥೆಯಾಗಿದ್ದಳು...ಕೆದರಿದ ಕೂದಲು,ಹರಕಲು ಮೈ ಕಾಣುವಂತ ಬಟ್ಟೆ...ಬೆಳೆದ ಉಗುರುಗಳು ..ಕಾರಣವಿಲ್ಲದ ನಗು, ಏನೇನೋ ಅರ್ಥವಿಲ್ಲದ ಬಡಬಡಿಕೆ ...ಯಾರಾದರು ಕೊಟ್ಟ ತಿಂಡಿ ತಿನ್ನುತ್ತ ಅವಳದೇ ಲೋಕದಲ್ಲಿ ವಿಹರಿಸುತ್ತಿದ್ದವಳು....ವಯಸ್ಸಲ್ಲಿ ಅಷ್ಟು ದೊಡ್ದವಳಾದರೂ ಮುಖದಲ್ಲಿ ಅದೇನೋ ಮುಗ್ಧತೆ....ನಗುವ ಆ ಕಣ್ಣುಗಳಲ್ಲಿ ಅದೇನೋ ಹೊಳಪು.....ನಾನು ಎಷ್ಟೋ ಹೊತ್ತು ಅವಳನ್ನೇ ನೋಡುತ್ತಾ ಕುಳಿತಿದ್ದೆ....ಇದು ಪ್ರತಿ ವರ್ಷ ..ಸುಮಾರು ಮೂರು ನಾಲ್ಕು ವರ್ಷ ಸತತ ಸ್ಕೂಲ್ ರಜೆಯಲ್ಲಿ ನಾನು ಕಂಡ ದೃಶ್ಯ......ಆಮೇಲೆ ನಾನು ಕಾಲೇಜ್ ಗೆ ಹೊನ್ನಾವರಕ್ಕೆ ಹೋಗಲು ಶುರು ಮಾಡಿದಾಗ ಅವಳನ್ನ ದಿನಾಲೂ ಹೈವೇ ಸರ್ಕಲ್ ಅಲ್ಲಿ ನೋಡುತ್ತಿದ್ದೆ..ಅಷ್ಟು ವರ್ಷದಿಂದ ನಾನು ಯಾವ ಬದಲಾವಣೆಯನ್ನೂ ಅವಳಲ್ಲಿ ಕಾಣಲಿಲ್ಲ......ಹೀಗೆ ದಿನಗಳು ಉರುಳುತ್ತಿರಲು ಇದ್ದಕ್ಕಿದ್ದಂತೆ ಮಂಜುಳಾ ಸರ್ಕಲ್ಲಿಂದ ಕಾಣೆ ಆಗಿದ್ದಳು.....ಒಮ್ಮೆ ಕುತೂಹಲ ತಡೆಯದೆ ಸರ್ಕಲ್ ಅಲ್ಲಿ ಇರೋ ಒಂದು ಹಣ್ಣಿನ ಅಂಗಡಿಯವನ ಬಳಿ ಅವಳ ಬಗ್ಗೆ ವಿಚಾರಿಸಿದಾಗ ತಿಳಿಯಿತು ಅವಳ ಮೇಲೆ ಲೈಂಗಿಕ ದೌರ್ಜನ್ಯ ನಡೆದು ಅವಳು ಗರ್ಭಿಣಿ ಎಂದು..ಕೇಳಿ ಅಲ್ಲೇ ಬಿಕ್ಕಳಿಸಿದ್ದೆ ಅವಳ ಅಸಹಾಯಕತೆ ಕಣ್ಣಮುಂದೆ ಕಟ್ಟಿದಂತಾಗಿ ...ಹಗಲೆಲ್ಲ ಹುಚ್ಚಿ ಥೂ ಅಂತೆಲ್ಲ ಉಗಿಯೋ ಜನರು ರಾತ್ರಿ ಆದಾಗ ಅದೇ ಹುಚ್ಚಿಯ ದೇಹವನ್ನೇ ರಣಹದ್ದುಗಳಂತೆ ಕುಕ್ಕುವದ ನೆನೆದು ... ಕೊನೆಗೊಂದು ದಿನ ತಿಳಿಯಿತು ಅವಳು ಮಗುವಿಗೆ ಜನ್ಮ ಕೊಡುವಾಗ ಸತ್ತಳು ಅನ್ನೋ ಸುದ್ಧಿ...ಹೀಗೆ ಮಂಜುಳನಂತವರು,ಅಸಹಾಯಕ ಮುಗ್ಧ ಮಕ್ಕಳು,ಹೀಗೆ ಅದೆಷ್ಟು ಹೆಣ್ಣು ಜೀವಗಳು ಇಂತ ಮೃಗೀಯ ವರ್ತನೆಗೆ ಬಲಿಯಾಗುತ್ತಿದ್ದಾರೋ ..ಇದಕ್ಕೆ ಉತ್ತರ ನೀಡುವವರಾರು ,ಇವರಿಗೆಲ್ಲ ಎಲ್ಲಿಯ ರಕ್ಷಣೆ...ತಮ್ಮಮೇಲೆ ಏನು ನಡೆಯುತ್ತಿದೆ ಎನ್ನೊ ಕನಿಷ್ಠ ಜ್ಞಾನವೂ ಇಲ್ಲದ ಇವರ ಪರಿಸ್ಥಿತಿ ಸುಧಾರಿಸುವದಾದರೂ ಎಂತು.......ಮನಸಾರೆ ಒಪ್ಪಿ ಸೇರಿ ಹೆಣ್ಣಿನ ಜನ್ಮಕ್ಕೆ ಸಾರ್ಥಕ್ಯ ಕೊಡುವ ಕ್ರಿಯೆ ಇಂದು ಬಲವಂತ ದೌರ್ಜನ್ಯದಿಂದ ಹೆಣ್ಣಿನ ಜನ್ಮವೇ ಶಾಪ ಅನ್ನೋ ಪರಿಸ್ಥಿತಿ ಬಂದಿರುವುದು ಶೋಚನೀಯ....ಇಂತವರಿಗೆಲ್ಲ ಧಿಕ್ಕಾರ ವಿರಲಿ....

2 comments:

  1. ದೀಪದಿಂದ ದೀಪವಷ್ಟೇ ಹಚ್ಚಬೇಕಿತ್ತು, ಮನೆ-ಮನಗಳನ್ನೂ ಹಚ್ಚಿಬಿಡುತ್ತಿದ್ದಾರೆ.. ನಾವು ಇಂತಹ ಗಂಡಸರಿಂದ ತಲೆ ತಗ್ಗಿಸುವಂತಾಗಿದೆ.

    ReplyDelete
  2. ಮಾನವೀಯತೆ ಮರೆತ ನರರೂಪದ ರಾಕ್ಷಸರು ಇಂತವರ ಮೈಯಲ್ಲಿ ಒಬ್ಬರ ರಕ್ತಹರಿಯುವುದಿಲ್ಲ

    ReplyDelete